ಹುಣಸೂರು: ಬಜೆಟ್‌ನಲ್ಲಿ ದಲಿತರಿಗೆ ಮೀಸಲಾದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಬಾರದು ಎಂದು ದಲಿತ ಸಂಘರ್ಷ ಸಮಿತಿ(ದಸಂಸ)ಸದಸ್ಯರು ಮುಖ್ಯಮಂತ್ರಿಯನ್ನು ಆಗ್ರಹಿಸಿದರು.
ಇತ್ತೀಚೆಗೆ ಮೈಸೂರಿನ ಜಲದರ್ಶಿನಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಂಡು ಸರ್ಕಾರಕ್ಕೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ದಸಂಸ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ ತಿಳಿಸಿದರು.
ಸಭೆಯಲ್ಲಿ ಈ ಬಾರಿಯ ಬಜೆಟ್‌ನಲ್ಲಿ ದಲಿತರು ಮತ್ತು ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ಹೆಚ್ಚು ಹಣ ಮೀಸಲಿಡಬೇಕು. ಈ ಮೀಸಲಿಟ್ಟ ಹಣವನ್ನು ಗ್ಯಾರಂಟಿಗಳಿಗೆ ಬಳಕೆ ಮಾಡಿಕೊಳ್ಳಬಾರದು. ಮೈಸೂರು ನಗರದಲ್ಲಿ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದ ಕಾಮಗಾರಿಯನ್ನು ಸರ್ಕಾರದ ವತಿಯಿಂದ ಅಗತ್ಯ ಹಣ ಬಿಡುಗಡೆಗೊಳಿಸಿ ಪೂರ್ಣಗೊಳಿಸಬೇಕು. ರಾಜ್ಯದ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ಜಾತಿ ಅಲೆಮಾರಿ ನಿರುದ್ಯೋಗಿ ಯುವಕ -ಯುವತಿಯರಿಗೆ ತರಬೇತಿ ನೀಡಿ ಕಾರ್ಖಾನೆಗಳಿಗೆ ಮಾಲೀಕತ್ವ ನೀಡುವ ಯೋಜನೆಗಳನ್ನು ಸರ್ಕಾರ ರೂಪಿಸಬೇಕು. ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ವೇತನದಾರರು ಸಂಕಷ್ಟದಲ್ಲಿದ್ದು, ಪ್ರತಿ ತಿಂಗಳು ಮಾಸಾಶನವನ್ನು ತಲಾ 3000 ರೂ. ಗಳಿಗೆ ಹೆಚ್ಚಿಸಬೇಕು. ರಾಜ್ಯದ ಎಲ್ಲ ಸಂಘ-ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕ ಕುಟುಂಬಗಳಿಗೆ ನಿವೇಶನ, ಮನೆಗಳನ್ನು ಸರ್ಕಾರ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ರಾಜ್ಯ ಅಲೆಮಾರಿ, ಅರೆ ಅಲೆಮಾರಿ ಜನಾಂಗಗಳ ಒಕ್ಕೂಟದ ರಾಜ್ಯಾಧ್ಯಕ್ಷ ವೈ.ಕುಮಾರ್, ದಸಂಸ ಮುಖಂಡರಾದ ದೇವೇಂದ್ರ ಕುಳುವಾಡಿ, ಕಿರಿಜಾಜಿ ಗಜೇಂದ್ರ, ವೆಂಕಟೇಶ, ಶ್ರೀಧರ, ನಂದನ್ ಕುಮಾರ್, ಲೋಕೇಶ, ಸ್ವಾಮಿ, ಮಂಜಪ್ಪ, ಸತೀಶ, ಮಲ್ಲೇಶ, ಶ್ರೀನಿವಾಸ, ಹರೀಶ, ಅಂಗವಿಕಲರ ಸಂಘದ ಅಧ್ಯಕ್ಷ ಶಿವಶೆಟ್ಟಿ ಕೆರೆಯೂರು, ತಿಮ್ಮರಾಯಿ, ಕುಮಾರ, ರಾಜೇಶ್ವರಿ, ಶೈಲಜಾ, ಚಿಕ್ಕಮಾದೇವಮ್ಮ, ರಾಣಿ ಮುಂತಾದವರು ಹಾಜರಿದ್ದರು.