ಬೆಂಗಳೂರು: ನಗರದ ಸೌಲಭ್ಯವನ್ನು ಬಳಸಿಕೊಂಡು ಉದ್ಯಮ ಆರಂಭಿಸಿ ದೊಡ್ಡ ಮಟ್ಟಕ್ಕೇರಿದವರು ಈಗ ಸಣ್ಣ ವಿಷಯವನ್ನು ಮುಂದಿಟ್ಟುಕೊಂಡು ಹುಯಿಲೆಬ್ಬಿಸುತ್ತಿದ್ದಾರೆ. ಬೆಂಗಳೂರಿನ ಬಗ್ಗೆ ಟೀಕೆ ಟಿಪ್ಪಣಿ ಮಾಡಲು ಟ್ವೀಟ್ ಮೊರೆ ಹೋಗಿರುವವರು ಬೆಂಗಳೂರಿನ ಘನತೆಗೆ ಚ್ಯುತಿ ತರಬೇಡಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಐಟಿ ಉದ್ಯಮಿಗಳಿಗೆ ಕಿವಿಮಾತು ಹೇಳಿದ್ದಾರೆ.
ಕೋರಮಂಗಲದಲ್ಲಿ ‘ಬೆಂಗಳೂರು ನಡಿಗೆ’ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದ ಅವರು, ಬೆಂಗಳೂರಿಗೆ ಬಂದು ಬೆಳೆದಿರುವವರು ಹಿಂದೆ ಹೇಗಿದ್ದೆವು, ಈಗ ಹೇಗಿದ್ದೇವೆ ಎಂಬುದನ್ನು ಮರೆತಂತಿದೆ. ನಾವು ನಮ್ಮ ಮೂಲವನ್ನು ಮರೆಯಬಾರದು, ಮೂಲವನ್ನು ಮರೆತರೆ ಯಶಸ್ಸು ಸಾಧಿಸುವುದಿಲ್ಲ ಎಂದು ನಾನು ನಂಬಿದ್ದೇನೆ ಎಂದು ಪರೋಕ್ಷವಾಗಿ ಐಟಿ-ಬಿಟಿ ಉದ್ಯಮದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು.
ನಾವು ಟೀಕೆ ಹಾಗೂ ವಿಮರ್ಶೆಗಳನ್ನು ಸ್ವಾಗತಿಸುತ್ತೇವೆ. ಟೀಕೆಗಳು ಇದ್ದಾಗಲೇ ಪ್ರಜಾಪ್ರಭುತ್ವಕ್ಕೆ ಹೆಚ್ಚು ಮೌಲ್ಯ ಇರುತ್ತದೆ. ಆದರೆ, ಕೆಲವರು ವಿಕೋಪಕ್ಕೆ ಹೋಗಿ ಟೀಕಿಸುತ್ತಾರೆ. ಅಂತಹವರ ಟೀಕೆ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ ಪೂರ್ಣಗೊಳಿಸಿದೆ. ಈ ಅವಧಿಯಲ್ಲಿ ನಾವು ಮಾಡಿದ ಕೆಲಸಗಳ ಬಗ್ಗೆ ಸಾರ್ವಜನಿಕರಿಗೆ, ವಿರೋಧ ಪಕ್ಷದವರಿಗೆ ಎಲ್ಲರಿಗೂ ತಿಳಿದಿದೆ. ಇಡೀ ದೇಶದಲ್ಲಿ ರಸ್ತೆ ಸಮಸ್ಯೆ ಇದೆ. ಅವರೆಲ್ಲಾ ಮಾಧ್ಯಮಗಳನ್ನು ನಿಯಂತ್ರಣ ಮಾಡುತ್ತಿದ್ದಾರೆ. ನಾವು ಮುಕ್ತವಾಗಿ ಬಿಟ್ಟಿದ್ದೇವೆ. ದೆಹಲಿ, ಮುಂಬೈ ಸೇರಿ ಎಲ್ಲಿಗೆ ಬೇಕಾದರೂ ಕರೆದುಕೊಂಡು ಹೋಗಿ ರಸ್ತೆಗಳ ಸಮಸ್ಯೆಗಳನ್ನು ನಾವು ತೋರಿಸುವೆ ಎಂದು ಡಿಸಿಎಂ ಸವಾಲು ಹಾಕಿದರು.
ಶೀಘ್ರ ಸಭೆ:
ಐಟಿ ಕಾರಿಡಾರ್ ಸೇರಿ ವಿವಿಧೆಡೆ ರಸ್ತೆಗುಂಡಿ, ರಸ್ತೆ ದುರಸ್ತಿ ವಿಚಾರವಾಗಿ ಐಟಿ ಬಿಟಿ ಕಂಪನಿಗಳ ಮುಖ್ಯಸ್ಥರು, ಪ್ರತಿನಿಧಿಗಳೊಂದಿಗೆ ಪ್ರತ್ಯೇಕ ಸಭೆ ಮಾಡಲಿದ್ದೇವೆ. ಟೆಕ್ ವಲಯದಿಂದ ಬರುವ ಸಲಹೆಗಳನ್ನು ಸ್ವೀಕರಿಸಲಾಗುವುದು. ಈ ವಿಚಾರವಾಗಿ ಸಚಿವರಾದ ಪ್ರಿಯಾಂಕ್ ಖರ್ಗೆ, ಎಂ.ಬಿ. ಪಾಟೀಲ್ ಅವರೊಂದಿಗೆ ಚರ್ಚೆ ಮಾಡಿ ಬೇಗನೆ ಸಭೆ ಆಯೋಜಿಸಲಾಗುವುದು ಎಂದು ಡಿಸಿಎಂ ಭರವಸೆ ನೀಡಿದರು.
ಆರ್‌ಎಸ್‌ಎಸ್ ವಿಚಾರದಲ್ಲಿ ಸರ್ಕಾರ ಯಾವುದೇ ಹೊಸ ನಿಯಮ ರೂಪಿಸಿಲ್ಲ. ಬಿಜೆಪಿ ಸರ್ಕಾರದ ಆದೇಶವನ್ನಷ್ಟೇ ಹೊರಡಿಸಿದ್ದೇವೆ. 2013ರಲ್ಲಿ ಜಗದೀಶ್ ಶೆಟ್ಟರ್ ನೇತೃತ್ವದ ಸರ್ಕಾರದ ಆದೇಶವನ್ನು ಮತ್ತೇ ಜಾರಿಗೊಳಿಸುತ್ತಿದ್ದೇವೆ ಅಷ್ಟೆ. ಈ ವಿಚಾರದಲ್ಲಿ ಪ್ರತಿಪಕ್ಷ ನಮ್ಮ ಮೇಲೆ ವೃಥಾ ಆರೋಪ ಹೊರಿಸುವುದು ಸಲ್ಲ.
- ಡಿ.ಕೆ. ಶಿವಕುಮಾರ್, ಡಿಸಿಎಂ