ಗದಗ ತಾಲೂಕಿನ ಬಳಗಾನೂರಿನ ಚಿಕೇನಕೊಪ್ಪದ ಶ್ರೀಚನ್ನವೀರಶರಣರ ಮಠದಲ್ಲಿ ಮಂಗಳವಾರ ಚನ್ನವೀರಶರಣರ 30ನೇ ಪುಣ್ಯಸ್ಮರಣೋತ್ಸವ, ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ ಜರುಗಿತು.
ವೀರೇಶ್ವರ ಪುಣ್ಯಾಶ್ರಮದ ಶ್ರೀ ಕಲ್ಲಯ್ಯಜ್ಜನವರು ಆಶೀರ್ವಚನ ನೀಡಿ, ದುಂದುವೆಚ್ಚದ ಮದುವೆಗೆ ಜನ ಆಸ್ತಿ, ಬಂಗಾರ, ಹಣ ಕಳೆದುಕೊಂಡು ಹಣಕಾಸಿನ ತೊಂದರೆ ಅನುಭವಿಸುತ್ತಾರೆ. ಹೊಲ, ಮನೆಗಳ ಮೇಲೆ ಸಾಲ ಮಾಡಿ ಸೂಲದಲ್ಲಿ ಸಿಲುಕುತ್ತಾರೆ. ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕಿ, ನೆಮ್ಮದಿಯ ಬದುಕಿಗೆ ಸಹಾಯವಾಗುವುದು. ಚನ್ನವೀರಶರಣರು ಶಿವಯೋಗಿಗಳಾಗಿ ಬಂದವರು. ತ್ರಿಕಾಲ ಜ್ಞಾನಿಗಳಾಗಿದ್ದವರು. ಅವರ ಪುಣ್ಯಕ್ಷೇತ್ರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಂಪತಿ ಪರಸ್ಪರ ನಂಬಿಕೆ, ವಿಶ್ವಾಸ, ಪ್ರೀತಿಯನ್ನು ಹೊಂದಿ ಉಳಿದ ಜನರಿಗೆ ಮಾದರಿಯಾಗುವ ರೀತಿಯಲ್ಲಿ ಕುಟುಂಬ ಜೀವನ ನಿರ್ವಹಿಸಬೇಕು ಎಂದರು.
ಕನಕಗಿರಿಯ ಸುವರ್ಣಗಿರಿ ವಿರಕ್ತಮಠದ ಡಾ. ಚನ್ನಮಲ್ಲ ಮಹಾಸ್ವಾಮೀಜಿ ಮಾತನಾಡಿ, ಮನುಷ್ಯ ಜನ್ಮ ಹೊತ್ತು ಭೂಮಿಗೆ ಬಂದ ನಾವು ಸಮಾಜಕ್ಕೆ ವಿಶೇಷ ಕೊಡುಗೆ ನೀಡಬೇಕು. ಸಮಾಜದಲ್ಲಿ ಸರ್ವರನ್ನೂ ಪ್ರೀತಿಸುವ ಅಂತಃಕರಣ ಹೊಂದಿರಬೇಕು. ಸಮಾಜವೇ ನನ್ನ ಕುಟುಂಬ ಎಂದು ನಂಬಿ ಬಾಳಿದವರು ಶರಣರು. ಅವರ ನುಡಿಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಜೀವನದ ಸಾರ್ಥಕತೆ ಹೆಚ್ಚಿಸಿಕೊಳ್ಳಬೇಕು ಎಂದರು.
ಮುದಗಲ್ಲ ಮಹಾಂತಸ್ವಾಮೀಜಿ ಮಾತನಾಡಿ, ಕಲ್ಯಾಣ ಮಹೋತ್ಸವದಲ್ಲಿ ಭಾಗಿಗಳಾದ ದಂಪತಿ ಭಾಗ್ಯಶಾಲಿಗಳು. ಶರಣರ ಭಕ್ತಿ ಪರಂಪರೆ ಬೆಳೆಸಿಕೊಂಡು ಶರಣ ಧರ್ಮದ ಜೀವನ ನಿರ್ವಹಿಸಿ ದಾಂಪತ್ಯ ಧರ್ಮ ಪಾಲಿಸಲು ತಿಳಿಸಿದರು.
ಅರಹುಣಸಿಯ ನಿವೃತ್ತ ಶಿಕ್ಷಕ ಕೆ. ಬಿ. ಕಂಬಳಿ ವಿರಚಿತ ಶ್ರೀಚನ್ನವೀರ ಶರಣರ ಲೀಲಾಮೃತ ಮೌನಯೋಗಿ 4ನೇ ಮುದ್ರಣ ಗ್ರಂಥ ಬಿಡುಗಡೆಗೊಳಿಸಲಾಯಿತು. ರಾಜ್ಯ ಪ್ರಶಸ್ತಿ ಪುರಸ್ಕೃತ ಸಾಹಿತಿ, ನಾಟಕಕಾರ ಗುಂಡೂರಿನ ಎಸ್.ವಿ. ಪಾಟೀಲ ಅವರಿಗೆ ಶರಣರಮಠ ಬಳಗಾನೂರ ಹಾಗೂ ನವಲಗುಂದದ ಉಮಾ ವಿದ್ಯಾಶ್ರೀ ಟ್ರಸ್ಟ್ ಸಹಯೋಗದಲ್ಲಿ ಶರಣಶ್ರೀ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಶಾಂತವೀರ ಶರಣರು ನೇತೃತ್ವ ವಹಿಸಿದ್ದರು. ಹಿರೇಮಾಗಡಿಯ ಶಿವಮೂರ್ತಿ ಮುರುಘರಾಜೇಂದ್ರ ಮಹಾಸ್ವಾಮಿಗಳು ಸನ್ನಿಧಾನ ವಹಿಸಿದ್ದರು. ಶಿವಪ್ರಕಾಶ ಶರಣರು ಶಿವಯೋಗಿ ದೇವರು, ಕೇಂದ್ರ ಮಾಜಿ ಸಚಿವ ಬಸವರಾಜ ಪಾಟೀಲ ಅನ್ವರಿ, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಜಿಪಂ ಮಾಜಿ ಸದಸ್ಯ ಹಾಲಪ್ಪ ಗಾದಿಗನೂರ, ಭೀಮಸಿಂಗ ರಾಠೋಡ, ಪಿ. ಸಿ. ಹಿರೇಮಠ ಇತರರು ಇದ್ದರು.