ಬಬಲೇಶ್ವರ ತಾಲೂಕಿನ ಶಿರಬೂರ ಗ್ರಾಮದಲ್ಲಿ ಗೃಹಲಕ್ಷ್ಮೀ ಯೋಜನೆಯನ್ನು ನೋಂದಾಯಿಸಿಕೊಳ್ಳಲು ಗ್ರಾಮ ಒನ್ ಸೇವಾ ಕೇಂದ್ರದಲ್ಲಿ ಹಣ ಪಡೆಯಲಾಗುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ತಹಸೀಲ್ದಾರ್ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭಾನುವಾರ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 
ಜಿಲ್ಲೆ

ಗೃಹಲಕ್ಷ್ಮೀ ಯೋಜನೆ ನೋಂದಣಿಗೆ ಹಣ ನೀಡಬೇಡಿ

Vijayapura - Desk - Chinnayya Chinnayyanamath

ವಿಜಯಪುರ: ಗೃಹಲಕ್ಷ್ಮೀ ಯೋಜನೆಯಡಿ ನೋಂದಾಯಿಸುವ ಪ್ರಕ್ರಿಯೆ ಉಚಿತವಾಗಿದ್ದು, ಹಣ ಪಡೆದು ನೋಂದಣಿ ಮಾಡುವ ಕೇಂದ್ರಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಎಚ್ಚರಿಕೆ ನೀಡಿದ್ದಾರೆ.

ಬಬಲೇಶ್ವರ ತಾಲೂಕಿನ ಶಿರಬೂರ ಗ್ರಾಮದ ಗ್ರಾಮ ಒನ್ ಸೇವಾ ಕೇಂದ್ರದಲ್ಲಿ ಹಣ ಪಡೆದು ನೋಂದಣಿ ಮಾಡಲಾಗುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಸಂಬಂಧಿಸಿದ ತಹಸೀಲ್ದಾರ್ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭಾನುವಾರ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಲ್ಯಾಮಿನೇಷನ್ ಮಾಡಿರುವುದಕ್ಕೆ ಹಣ ಪಡೆಯಲಾಗಿದೆ ಎಂದು ವರದಿ ಸಲ್ಲಿಸಿದ್ದಾರೆ. ಈ ಕೇಂದ್ರದ ಲಾಗಿನ್ ಹಾಗೂ ಪಾಸ್‌ವರ್ಡ್ ವಿವರ ನಿಷ್ಕ್ರಿಯಗೊಳಿಸಲು ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಸಾರ್ವಜನಿಕರು ಯಾವುದೇ ಮಧ್ಯವರ್ತಿಗಳ ಮೊರೆ ಹೋಗದೆ ತಮ್ಮ ವ್ಯಾಪ್ತಿಯ ಸೇವಾ ಕೇಂದ್ರಗಳಿಗೆ ನೇರವಾಗಿ ತೆರಳಿ ಯಾವುದೇ ಶುಲ್ಕ ಪಾವತಿಸದೆ ಉಚಿತವಾಗಿ ಗೃಹಲಕ್ಷ್ಮೀ ಯೋಜನೆಗೆ ಹೆಸರು ನೋಂದಾಯಿಸುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ವ್ಯವಸ್ಥಿತ ನೋಂದಣಿಗೆ ಅವಕಾಶ ಕಲ್ಪಿಸಲಾಗಿದ್ದು, ಈ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲೆಯ ಗ್ರಾಮೀಣ ಪ್ರದೇಶದ ಲಾನುಭವಿಗಳು ಗ್ರಾಮ ಒನ್ ಕೇಂದ್ರ ಅಥವಾ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಹಾಗೂ ನಗರ ಪ್ರದೇಶದ ಲಾನುಭವಿಗಳು ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಉಚಿತವಾಗಿ ಹೆಸರು ನೋಂದಾಯಿಸಿಕೊಳ್ಳಬಹುದು. ಈ ಯೋಜನೆಯ ನೋಂದಣಿಗೆ ಯಾವುದೇ ಅಂತಿಮ ದಿನ ನಿಗದಿಯಾಗಿಲ್ಲ ಎಂದು ತಿಳಿಸಿದ್ದಾರೆ.

ಆಧಾರ್ ನಂಬರ್ ಜೋಡಣೆಯಾಗಿರುವ ಖಾತೆ ಹೊರತುಪಡಿಸಿ ಬೇರೆ ಖಾತೆಗೆ ಹಣ ವರ್ಗಾವಣೆ ಬಯಸಿದ್ದಲ್ಲಿ ಆ ಬ್ಯಾಂಕ್ ಖಾತೆ ಸಂಖ್ಯೆ ಒದಗಿಸಿ ಹೆಸರು ನೋಂದಾಯಿಸಿಕೊಳ್ಳುವಂತೆ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ ಹಾಗೂ ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಲ್ಯಾಮಿನೇಷನ್-ಪದರು ಹೊದಿತ ಸೌಲಭ್ಯಕ್ಕೆ ಅವಕಾಶ ಇಲ್ಲ, ಆದ್ದರಿಂದ ಸೇವಾ ಕೇಂದ್ರಗಳಲ್ಲಿ ಜನದಟ್ಟಣೆಯಾಗದಂತೆ ನೋಡಿಕೊಳ್ಳುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.