ಜಿಲ್ಲೆ

ಎಫ್‌ಐಆರ್ ದಾಖಲಿಸಲು ನಿರ್ಲಕ್ಷ್ಯ ಬೇಡ: ದಲಿತ ಕುಂದು ಕೊರತೆ ಸಭೆಯಲ್ಲಿ ಡಿಸಿಪಿ ಸೂಚನೆ

Avinash R

ವಿಜಯವಾಣಿ ಸುದ್ದಿಜಾಲ ಮಂಗಳೂರು: ಪೊಲೀಸ್ ಠಾಣೆಗೆ ಬರುವ ಸಾರ್ವಜನಿಕರ ಜತೆ ಇಲಾಖೆ ಅಧಿಕಾರಿಗಳು ಸಂಯಮದಿಂದ ವರ್ತಿಸಿ, ಅವರ ಅಹವಾಲುಗಳನ್ನು ಸ್ವೀಕರಿಸಬೇಕು. ದೂರು/ ಎಫ್‌ಐಆರ್ ದಾಖಲಿಸಿಕೊಳ್ಳಲು ಹಿಂಜರಿದರೆ ಅಥವಾ ಪ್ರಕರಣಗಳ ಬಗ್ಗೆ ನಿರ್ಲಕ್ಷೃ ವಹಿಸಿದರೆ ಅಂತಹ ಠಾಣಾ ಪೊಲೀಸರ ವಿರುದ್ಧವೇ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಬಿ.ಪಿ. ಎಚ್ಚರಿಕೆ ನೀಡಿದ್ದಾರೆ.

ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಭಾನುವಾರ ನಡೆದ ದಲಿತ ಕುಂದು ಕೊರತೆ ಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ಸ್ಥಳೀಯ ಠಾಣೆಯ ಪೊಲೀಸರು ಎಫ್‌ಐಆರ್‌ಗೆ ಹಿಂದೇಟು ಹಾಕಿದರೆ ಸಾರ್ವಜನಿಕರು ಪೊಲೀಸ್ ಆಯುಕ್ತರ ಕಚೇರಿಗೆ ಲಿಖಿತವಾಗಿ ದೂರು ಸಲ್ಲಿಸಬಹುದು ಎಂದವರು ಹೇಳಿದರು.

ಆಟಿ ತಿಂಗಳಿನಲ್ಲಿ ಕೆಲವೆಡೆ ಇತರ ಸಮುದಾಯದವರು ದಲಿತರಿಂದ ಆಟಿಕಳೆಂಜದ ವೇಷ ಹಾಕಿಸಿ ಹಣ ಸಂಗ್ರಹಿಸುತ್ತಿದ್ದಾರೆ. ಇದೊಂದು ರೀತಿಯ ದೌರ್ಜನ್ಯ. ಹಾಗಾಗಿ ‘ಆಟಿಕಳೆಂಜ’ ವೇಷ ಹಾಕಿಸುವವರು ಕಡ್ಡಾಯವಾಗಿ ಪೊಲೀಸರಿಂದ ಅನುಮತಿ ಪಡೆಯುವಂತೆ ಸೂಚನೆ ನೀಡಬೇಕು.ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ದಿನೇಶ್ ಕುಮಾರ್ ಅವರು, ಯಾರಾದರೂ ದೌರ್ಜನ್ಯ ನಡೆಸುತ್ತಿರುವ ಬಗ್ಗೆ ನಿರ್ದಿಷ್ಟವಾಗಿ ದೂರುಗಳಿದ್ದರೆ ನೀಡಬಹುದು. ಆದರೆ ಪರವಾನಗಿ ಪಡೆಯಬೇಕೆಂಬ ನಿಯಮ ರೂಪಿಸುವುದು ಅಸಾಧ್ಯ ಎಂದರು.

ಮುಲ್ಕಿ ಠಾಣಾಧಿಕಾರಿ ಹಾಗೂ ಸಿಬಂದಿ ಸಾರ್ವಜನಿಕರ ದೂರುಗಳಿಗೆ ಸ್ಪಂದಿಸುತ್ತಿಲ್ಲ. ಠಾಣಾಧಿಕಾರಿ ವರ್ತನೆಯೂ ಸರಿಯಿಲ್ಲ ಎಂಬುದಾಗಿ ಹಲವು ಮಂದಿ ಸಭೆಯಲ್ಲಿ ದೂರಿದರು. ಕಾರ್ನಾಡು ಅಮೃತನಗರದಲ್ಲಿರುವ ಮನೆಗೆ ನುಗ್ಗಿ ಸಹೋದರನ ಕೊಲೆಗೆ ಯತ್ನಿಸಿರುವ ಬಗ್ಗೆ ಎಫ್‌ಐಆರ್ ದಾಖಲಾಗಿ 3 ತಿಂಗಳಾದರೂ ಆರೋಪಿಗಳನ್ನು ಬಂಧಿಸಿಲ್ಲ. ಹಲ್ಲೆಯ ಬಗ್ಗೆ ದೂರು ನೀಡಲು ಠಾಣೆಗೆ ತೆರಳಿದ್ದ ತನ್ನನ್ನು ಸಂಜೆಯಿಂದ ನಸುಕಿನವರೆಗೆ ಠಾಣೆಯಲ್ಲಿ ಕುಳ್ಳಿರಿಸಿದ್ದರು ಎಂದು ತುಳಸಿ ಅವರು ದೂರಿದರು. ಈ ಸಂದರ್ಭ ಹಲವಾರು ಮಂದಿ ದಲಿತ ಮುಂದಾಳುಗಳು ಮುಲ್ಕಿ ಠಾಣಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಪ್ರಕರಣ ಸಹಿತ ಮುಲ್ಕಿ ಠಾಣಾಧಿಕಾರಿ ನಿರ್ಲಕ್ಷೃ, ದುರ್ವರ್ತನೆ ಬಗ್ಗೆ ತನಿಖೆ ನಡೆಸುವಂತೆ ದಲಿತ ಮುಖಂಡರು ಒತ್ತಾಯಿಸಿದರು. ಈ ಬಗ್ಗೆ ವಿಚಾರಣೆ ನಡೆಸುವುದಾಗಿ ಉತ್ತರ ಉಪವಿಭಾಗದ ಎಸಿಪಿ ಮನೋಜ್ ಕುಮಾರ್ ನಾಯ್ಕ ಭರವಸೆ ನೀಡಿದರು.

ಠಾಣೆಗಳ ಮಟ್ಟದಲ್ಲಿಯೂ ದಲಿತರ ಕುಂದು ಕೊರತೆ ಸಭೆ ನಡೆಯುತ್ತದೆ. ಆದರೆ ಇಂತಹ ಸಭೆಗಳು ಹೆಚ್ಚು ಪರಿಣಾಮಕಾರಿಯಾಗಬೇಕಾದರೆ ಕಾಲನಿಗಳ ಮಟ್ಟದಲ್ಲಿ ಸಭೆ ನಡೆಯಬೇಕು. ಇದರಲ್ಲಿ ಪೊಲೀಸ್, ಮೆಸ್ಕಾಂ ಸಹಿತ ವಿವಿಧ ಇಲಾಖೆಗಳು ಪಾಲ್ಗೊಳ್ಳಬೇಕು. ಇತ್ತೀಚೆಗೆ ಉಳ್ಳಾಲ ಠಾಣಾ ವಾಪ್ತಿಯ ಕಾಲನಿಯಲ್ಲಿ ನಡೆದ ಇಂತಹ ಸಭೆ ಯಶಸ್ವಿಯಾಗಿದೆ ಎಂದು ಗಿರೀಶ್ ಕುಮಾರ್ ಹೇಳಿದರು.

ಮುಖಂಡ ಶೀನ ಮಾತನಾಡಿ, ಜಾತಿನಿಂದನೆ ಕಾಯ್ದೆಯನ್ನು ಕೆಲವರು ದುರುಪಯೋಗ ಮಾಡುತ್ತಿದ್ದಾರೆ. ಇದಕ್ಕೆ ಅವಕಾಶ ನೀಡಬಾರದು. ಇತ್ತೀಚೆಗೆ ಹಣ ನೀಡಿದವರು ಅದನ್ನು ವಾಪಸ್ ಕೇಳಿದಾಗ ಅವರ ಮೇಲೆಯೂ ಜಾತಿನಿಂದನೆ ಪ್ರಕರಣದ ಬೆದರಿಕೆ ಹಾಕಿರುವುದು ಗಮನಕ್ಕೆ ಬಂದಿದೆ. ಜಾತಿನಿಂದನೆ ಪ್ರಕರಣಗಳ ಬಗ್ಗೆ ಪೊಲೀಸರು ಕೂಲಂಕಷವಾಗಿ ತನಿಖೆ ನಡೆಸಬೇಕು ಎಂದು ಹೇಳಿದರು.

ಮೂಡುಬಿದಿರೆ ಠಾಣಾ ವ್ಯಾಪ್ತಿಯ ಧರೆಗುಡ್ಡೆಯಲ್ಲಿ ತಲವಾರು ಹಿಡಿದು ಬಂದು ಅಂಗವಿಕಲರ ಮೇಲೆ ದೌರ್ಜನ್ಯ ಎಸಗಿದ ಘಟನೆ ಕಳೆದ ಎಪ್ರಿಲ್‌ನಲ್ಲಿ ಸಂಭವಿಸಿತ್ತು. ಆದರೆ ಇದುವರೆಗೂ ಆರೋಪಿಗಳನ್ನು ಬಂಧಿಸಿಲ್ಲ ಎಂದು ದಲಿತ ಮುಖಂಡ ಎಸ್.ಪಿ ಆನಂದ ದೂರಿದರು. ಈ ಬಗ್ಗೆ ಕೂಡಲೇ ಎಫ್‌ಐಆರ್ ದಾಖಲಿಸುವಂತೆ ಡಿಸಿಪಿ ಸೂಚನೆ ನೀಡಿದರು.