ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿಗಳು ಉನ್ನತ ವಿಜ್ಞಾನಿಗಳಾಗಲು ಮೊದಲಿಗೆ ವಿಜ್ಞಾನದ ತಿರುಳು ಅರ್ಥ ಮಾಡಿಕೊಳ್ಳುವುದರ ಜತೆಗೆ ವಿಜ್ಞಾನ, ತಂತ್ರಜ್ಞಾನ ಮತ್ತು ಇಂಜಿನಿಯರಿಂಗ್ ವಿಷಯಗಳ ವ್ಯತ್ಯಾಸ ಅರ್ಥೈಸಿಕೊಂಡು ಅದರ ಪ್ರಕಾರ ಅಧ್ಯಯನ ಮಾಡಬೇಕು ಎಂದು ಉನ್ನತ ಶಿಕ್ಷಣ ಅಕಾಡೆಮಿ ವಿಶ್ರಾಂತ ನಿರ್ದೇಶಕ ಪ್ರೊ. ಎಸ್.ಎಂ. ಶಿವಪ್ರಸಾದ ಹೇಳಿದರು.
ವಿಶ್ವ ವಿಜ್ಞಾನ ದಿನ ಹಾಗೂ ವಿಶ್ವ ಓರೆನ ದಿನ ನಿಮಿತ್ತ ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಆಶ್ರಯದಲ್ಲಿ ಶುಕ್ರವಾರ ವಿಜ್ಞಾನ ಕೇಂದ್ರದಲ್ಲಿ ಏರ್ಪಡಿಸಿದ್ದ ವಿಜ್ಞಾನ ರಸಪ್ರಶ್ನೆ, ಚಿತ್ರಕಲೆ ಸ್ಪರ್ಧೆ ಹಾಗೂ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಕೃತಕ ಬುದ್ದಿಮತ್ತೆ, ನ್ಯಾನೋ ತಂತ್ರಜ್ಞಾನ ಮತ್ತು ಬಯೋ ಟೆಕ್ನಾಲಜಿ ವಿಷಯಗಳ ಸಂಗಮದ ಹೊಸ ಕ್ರಾಂತಿಯಿಂದ ಭವಿಷ್ಯದಲ್ಲಿ ಆಗುವ ಬದಲಾವಣೆಗಳ ಕುರಿತು ಮಾಹಿತಿ ನೀಡಿದರು. ಮೊಬೈಲ್‌ನ್ನು ಉತ್ತಮ ರೀತಿ ಉಪಯೋಗ ಪಡಿಸಿಕೊಂಡರೆ ಸಾಕಷ್ಟು ಜ್ಞಾನ ಪಡೆಯಬಹುದು ಎಂದರು.
ನಂದೀಶ ಕಾಖಂಡಕಿ ಮಾತನಾಡಿ, ಉತ್ತಮ ಸಾಧನೆ ಮಾಡಿರುವ ಬಹುತೇಕ ವಿಜ್ಞಾನಿಗಳು ಸಾಮಾನ್ಯ ಹಾಗೂ ಬಡ ಕುಟುಂಬಗಳಿಂದ ಬಂದವರು. ಅವರ ಜ್ಞಾನದ ಹಸಿವು ಅವರನ್ನು ಉನ್ನತ ಮಟ್ಟಕ್ಕೆ ತಲುಪಿಸಿದೆ. ವಿದ್ಯಾರ್ಥಿಗಳು ತಮ್ಮಲ್ಲಿರುವ ಋಣಾತ್ಮಕ ಧೋರಣೆಗಳನ್ನು ತುಳಿದು ಜ್ಞಾನ ದಾಹ ಹೆಚ್ಚಿಸಿಕೊಂಡು ಅಧ್ಯಯನ ಮಾಡಿದರೆ ಉತ್ತಮ ವಿಜ್ಞಾನಿಗಳಾಗಬಹುದು ಎಂದರು.
ಡಾ. ವಿ.ಡಿ. ಬೋಳಿಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಿ.ಎಫ್. ಚಂಡೂರ ನಿರೂಪಿಸಿದರು. ವಿಶಾಲಾಕ್ಷಿ ಎಸ್. ಜೆ, ವಂದಿಸಿದರು.
ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಸಚ್ಚಿದಾನಂದ ಕುಂಬಾರ, ಮನೀಶಕುಮಾರ ಪಡಸಲಗಿ (ಪ್ರಥಮ), ಶಮಂತ ನಾಯಕ, ಫರಾಜಿನ ಫಾತಿಮಾ ಆರ್.ಜಿ. (ದ್ವಿತೀಯ), ಬಂಡೆಪ್ಪ ಪರಸನ್ನವರ ಹಾಗೂ ನಾರಾಯಣ ಕಿತ್ತೂರ (ತೃತೀಯ) ಸ್ಥಾನ ಪಡೆದಿದ್ದಾರೆ. ಚಿತ್ರಕಲೆ ಸ್ಪರ್ಧೆಯಲ್ಲಿ ಪ್ರಿಯಾ ಹಡಪದ (ಪ್ರ), ಪೂರ್ಣಿಮಾ ಘಂಟಿ (ದ್ವಿ) ಹಾಗೂ ಸುಪ್ರಿಯಾ ಹಿರೇಮಠ (ತೃ) ಸ್ಥಾನ ಪಡೆದಿದ್ದಾರೆ.