ಹುಣಸೂರು: ಹನುಮ ಜಯಂತಿ ಮೆರವಣಿಗೆ ಅಂಗವಾಗಿ ಬಂಟಿಂಗ್ಸ್, ಬ್ಯಾನರ್‌ಗಳನ್ನು ಅಳವಡಿಸುವ ವೇಳೆ ಯಾವುದೇ ಪ್ರಮಾದವಾಗದಂತೆ ಎಚ್ಚರ ವಹಿಸಿರಿ... ಮೆರವಣಿಗೆಯಲ್ಲಿ ಇತರ ಮಹನೀಯರ ಭಾವಚಿತ್ರ ಪ್ರದರ್ಶನ, ಬಳಕೆ ನಿಷಿದ್ಧ... ಎಲ್ಲರ ಸಹಕಾರದಿಂದ ಉತ್ಸವ ಯಶಸ್ಸು ಸಾಧಿಸಲು ಸಾಧ್ಯ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಿ...
ಡಿ.15ರಂದು ಹುಣಸೂರಿನಲ್ಲಿ ಆಯೋಜಿಸಿರುವ 30ನೇ ವರ್ಷದ ಹನುಮ ಜಯಂತಿ ಉತ್ಸವದ ಹಿನ್ನೆಲೆಯಲ್ಲಿ ಪಟ್ಟಣದ ನಗರ ಠಾಣೆಯಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಸರ್ವಧರ್ಮಗಳ ಮುಖಂಡರ, ನಾಗರಿಕ ಸಭೆಯಲ್ಲಿ ಡಿವೈಎಸ್‌ಪಿ ಗೋಪಾಲಕೃಷ್ಣ ಉತ್ಸವ ಆಯೋಜಕರಿಗೆ ನಿರ್ದೇಶನ ನೀಡಿದರು.
ಬಂಟಿಂಗ್ಸ್‌ಗಳನ್ನು ಅಳವಡಿಸುವ ವೇಳೆ ಇತರ ಧರ್ಮೀಯರ ಭಾವನೆಗಳಿಗೆ ಧಕ್ಕೆಯಾಗಂತೆ ಎಚ್ಚರವಹಿಸಿಬೇಕು. ಇಲಾಖೆ ಸೂಚಿಸಿರುವ ನಿಗದಿತ ಸಮಯದಲ್ಲಿ ಅಳವಡಿಸಿ ನಿಗದಿತ ಸಮಯದೊಳಗೆ ತೆರವುಗೊಳಿಸುವ ಕರ್ತವ್ಯ ನಿಮ್ಮದು. ಕಟ್ಟಿದ ಬಂಟಿಂಗ್ಸ್‌ಗಳನ್ನು ಕಾಯುವ ಜವಾಬ್ದಾರಿ ನಿಮ್ಮದು. ನಿಮಗೆ ರಕ್ಷಣೆ ನೀಡುವ ಜವಾಬ್ದಾರಿ ನಮ್ಮದು. ಹನುಮ ಜಯಂತಿಯಲ್ಲಿ ಹನುಮನೇ ಪ್ರಮುಖ. ಬೇರೆ ಮಹನೀಯರ, ದೇವರ ಭಾವಚಿತ್ರ ಬಳಸುವಂತಿಲ್ಲ. ಮೀರಿದಲ್ಲಿ ಕಾನೂನು ಕ್ರಮವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಗರಾದ್ಯಂತ 300ಕ್ಕೂ ಹೆಚ್ಚು ಕಡೆ ಸಿಸಿ ಕ್ಯಾಮರಾಗಳನ್ನು ನಗರಸಭೆ ಸಹಯೋಗದಲ್ಲಿ ಅಳವಡಿಸಲಾಗುತ್ತಿದೆ. ಮೆರವಣಿಗೆ ವೇಳೆ ಹಿಂದುಪರ ಸಂಘಟನೆಗಳು ಮತ್ತು ಅನ್ಯಧರ್ಮೀಯರು ತಂಪುಪಾನೀಯ ಇನ್ನಿತರ ತಿಂಡಿಗಳನ್ನು ವಿತರಿಸಲು ಇಚ್ಛಿಸಿದ್ದಲ್ಲಿ ಮುಂದಾಗಿಯೇ ಇಲಾಖೆಗೆ ತಿಳಿಸಿರಬೇಕು. ಆಹಾರಗಳನ್ನು ಅರೋಗ್ಯ ಇಲಾಖೆ ಆರೋಗ್ಯ ನಿರೀಕ್ಷಕರ ಪರಿಶೀಲನೆ ಮತ್ತು ಅನುಮತಿ ನಂತರ ಮಾತ್ರ ವಿತರಿಸಬೇಕು. ಜಿಲ್ಲಾಡಳಿತ ನೀಡಿರುವ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಜಯಂತಿ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ಎಸ್.ಶರವಣ ಮಾತನಾಡಿ, ಶಾಂತಿ-ಸೌಹಾರ್ದತೆಯಿಂದ ಹನುಮ ಜಯಂತಿ ಆಚರಿಸಲು ಸಹಕಾರ ಕೋರಿದರು. ಪಟ್ಟಣ ವ್ಯಾಪ್ತಿಯ ಅಲ್ಲಲ್ಲಿ ಚರಂಡಿ ಅಭಿವೃದ್ಧಿ ಕಾಮಗಾರಿಗಳು ನಡೆದಿದ್ದು, ಮೆರವಣಿಗೆ ಸಾಗುವ ರಸ್ತೆಗಳ ಕಾಮಗಾರಿಯನ್ನು ಶನಿವಾರದೊಳಗೆ ಪೂರ್ಣಗೊಳಿಸಿ ಮೆರವಣಿಗೆ ಸುಗಮವಾಗಿ ಸಾಗಲು ಅನುವು ಮಾಡಿಕೊಡಲಾಗುವುದೆಂದು ಭರವಸೆ ನೀಡಿದರು.
ನಗರ ಠಾಣೆ ಇನ್‌ಸ್ಪೆಕ್ಟರ್ ಸಂತೊಷ್ ಕಶ್ಯಪ್ ಮಾತನಾಡಿ, ಸಮಯದ ದುರ್ಬಳಕೆ ಮಾಡಿಕೊಳ್ಳಲು ಯತ್ನಿಸುವ ಕಿಡಿಗೇಡಿಗಳ ಬಗ್ಗೆ ಇಲಾಖೆ ಸತತ ಗಮನವಿರಿಸಲಿದೆ. ಅಂಥ ಘಟನೆಗಳು ಜರುಗದಂತೆ ಎಲ್ಲ ಸಮುದಾಯದವರೂ ಗಮನದಲ್ಲಿಸಿರಿ ಕಾರ್ಯನಿರ್ವಹಿಸಿರಿ ಎಂದು ಸೂಚಿಸಿದರು.
ಹನುಮಂತೋತ್ಸವ ಸಮಿತಿ ಅಧ್ಯಕ್ಷ ವಿ.ಎನ್.ದಾಸ್, ಉಪಾಧ್ಯಕ್ಷ ಎಚ್.ವೈ.ಮಹದೇವ್, ಮಯೂರ, ನಗರಸಭೆ ಸದಸ್ಯ ಯೂನೂಸ್ ಖಾನ್, ಎ.ಎ.ಖಾಲಿದ್ ಮಾತನಾಡಿದರು. ನಗರಸಭೆ ಉಪಾಧ್ಯಕ್ಷೆ ಆಶಾ ಕೃಷ್ಣನಾಯ್ಕ, ಸದಸ್ಯರಾದ ಕೃಷ್ಣರಾಜ ಗುಪ್ತ, ದೇವರಾಜ್, ವಿವೇಕ್, ಮಾಲಿಕ್ ಪಾಷ, ಹಿಂದು ಪರ ಸಂಘಟನಗಳ ಮುಖಂಡರಾದ ಅನಿಲ್, ಸುನೀಲ್, ಸಚ್ಚಿನ್ ಬಾಗಲ್, ಚಂದ್ರಶೇಖರ್, ಅಪ್ಪಣ್ಣ, ವರದರಾಜ ಪಿಳ್ಳೆ, ಶಾಜಮ, ಅಸ್ಲಾಂ ಇತರರು ಇದ್ದರು.
ಬಿಗಿ ಭದ್ರತೆಗೆ ತಯಾರಿ: ಹನುಮ ಜಯಂತಿ ವೇಳೆ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸ್ ಇಲಾಖೆ ಈಗಾಗಲೇ ಸಿದ್ಧತೆ ನಡೆಸಿದೆ. ಮಂಗಳವಾರ ಬೆಳಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಗರಾದ್ಯಂತ ಮೆರವಣಿಗೆ ಸಾಗುವ ಮುಖ್ಯರಸ್ತೆಗಳನ್ನು ಪರಿಶೀಲಿಸಿ ಸಾಕಷ್ಟು ನಿರ್ದೇಶನಗಳನ್ನು ನೀಡಿದ್ದಾರೆ. ಮೆರವಣಿಗೆಯಂದು ಇಬ್ಬರು ಎಸ್‌ಪಿಗಳ ನೇತೃತ್ವದಲ್ಲಿ 6 ಡಿವೈಎಸ್‌ಪಿಗಳು, 12 ಸಿಐಗಳು, 42 ಪಿಎಸ್‌ಐ, 49 ಎಎಸ್‌ಐ, 900 ಪೊಲೀಸ್ ಸಿಬ್ಬಂದಿ, 10 ಕೆಎಸ್‌ಆರ್‌ಪಿ ತುಕಡಿ(ತುಕಡಿಯಲ್ಲಿ ತಲಾ 25 ಸಿಬ್ಬಂದಿ), 14 ಡಿಎಆರ್‌ತುಕಡಿಗಳು(ತಲಾ 7 ಸಿಬ್ಬಂದಿ)ಹಾಗೂ ಕಮಾಂಡೋ ಮೊಬೈಲ್ ವಾಹನದೊಂದಿಗೆ ಕಾನೂನು ಸುವ್ಯವಸ್ಥೆ ಕಾಪಾಡಲಿದ್ದಾರೆಂದು ಡಿವೈಎಸ್‌ಪಿ ಗೋಪಾಲಕೃಷ್ಣ ಮಾಹಿತಿ ಒದಗಿಸಿದರು.