ಜಿಲ್ಲೆ

ಪ್ರವಾಸಿಗರಿಗೆ ತಪ್ಪು ಮಾಹಿತಿ ನೀಡಬೇಡಿ: ಅರಮನೆ ಆಡಳಿತ ಮಂಡಳಿ ಉಪ ನಿರ್ದೇಶಕ ಸುಬ್ರಹ್ಮಣ್ಯ ಕೋರಿಕೆ

ಮೈಸೂರು: ಮೈಸೂರು ಅರಮನೆಗೆ ಬರುವ ಪ್ರವಾಸಿಗರಿಗೆ ತಪ್ಪು ಮಾಹಿತಿ ನೀಡುವ ಕೆಲಸ ನಡೆಯುತ್ತಿದೆ ಎಂದು ಮೈಸೂರು ಅರಮನೆ ಆಡಳಿತ ಮಂಡಳಿ ಉಪ ನಿರ್ದೇಶಕ ಸುಬ್ರಹ್ಮಣ್ಯ ಬೇಸರ ವ್ಯಕ್ತಪಡಿಸಿದರು.
ಮೈಸೂರು ಟ್ರಾವಲ್ಸ್ ಅಸೋಸಿಯೇಷನ್‌ನಿಂದ ಅರಮನೆ ಆಡಳಿತ ಮಂಡಳಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡೈರಿ ಹಾಗೂ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಪ್ರವಾಸಿ ತಾಣವಾದ ಮೈಸೂರಿಗೆ ದೇಶ, ವಿದೇಶದಿಂದ ಪ್ರವಾಸಿಗರು ಬರುತ್ತಿದ್ದಾರೆ. ಆದರೆ ಕೆಲವರು ಮೈಸೂರು ಅರಮನೆಗೆ ಬರುವ ಪ್ರವಾಸಿಗರಿಗೆ ತಪ್ಪು ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದಾರೆ. ಇಲ್ಲಿಗೆ ಬರುವ ಪ್ರವಾಸಿಗರನ್ನು ನಾವು ಸರಿಯಾಗಿ ನಡೆಸಿಕೊಂಡರೆ ಪ್ರವಾಸೋದ್ಯಮ ಅಭಿವೃದ್ಧಿ ಆಗುತ್ತದೆ. ಈ ನಿಟ್ಟಿನಲ್ಲಿ ಎಲ್ಲ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಾವು ಕೆಲಸ ಮಾಡಬೇಕಿದೆ ಎಂದರು.
ಒಟ್ಟಾರೆ ಮೈಸೂರನ್ನು ಪ್ರವಾಸಿ ಸ್ನೇಹಿ ನಗರ ಮಾಡೋಣ. ಇನ್ನು ಮುಂದೆ ಅರಮನೆಯಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳ ಬಗ್ಗೆಯೂ ಟ್ರಾವಲ್ಸ್ ಅಸೋಸಿಯೇಷನ್‌ಗೆ ಅಧಿಕೃತ ಮಾಹಿತಿ ನೀಡಲಾಗುವುದು. ಇದರಿಂದಾಗಿ ಎಲ್ಲ ಕಾರ್ಯಕ್ರಮಗಳಿಗೂ ಇನ್ನೂ ಉತ್ತಮ ಪ್ರತಿಕ್ರಿಯೆ ದೊರೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರು ಟ್ರಾವಲ್ಸ್ ಅಸೋಸಿಯೇಷನ್ ಅಧ್ಯಕ್ಷ ಜಯಪ್ರಕಾಶ್ ರಾಜೇ ಅರಸ್ ಮಾತನಾಡಿ, ಅರಮನೆಯಲ್ಲಿ ನಡೆಯುವ ಕಾರ್ಯಕ್ರಮಗಳ ಬಗ್ಗೆ ಅಸೋಸಿಯೇಷನ್‌ಗೆ ಮಾಹಿತಿ ನೀಡುವುದರಿಂದ ಪ್ರವಾಸಿಗರಿಗೂ ಮಾಹಿತಿ ರವಾನೆಯಾಗಲು ಅನುಕೂಲವಾಗುತ್ತದೆ ಎಂದರು.
ಮೈಸೂರು ಟ್ರಾವಲ್ಸ್ ಅಸೋಸಿಯೇಷನ್‌ನ ನಿಕಟಪೂರ್ವ ಅಧ್ಯಕ್ಷ ಸಿ.ಎ.ಜಯಕುಮಾರ್, ಗೌರವಾಧ್ಯಕ್ಷ ಬಿ.ಎಸ್.ಪ್ರಶಾಂತ್, ಉಪಾಧ್ಯಕ್ಷ ಡೇವಿಡ್ ರಾಜ್, ಮೈಸೂರು ಫಾರ್ಮಾ ಫೋರಂ ಅಧ್ಯಕ್ಷ ಎ.ಸುಧೀಂದ್ರ, ಜಿಲ್ಲಾ ಪ್ರವಾಸಿ ವಾಹನ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ನಾಗರಾಜ್, ಟೂರಿಸ್ಟ್ ಗೈಡ್ಸ್ ಅಸೋಸಿಯೇಷನ್‌ನ ಅಧ್ಯಕ್ಷ ಎಸ್.ಜೆ.ಅಶೋಕ್, ಮಾರ್ಗದರ್ಶಿಗಳಾದ ಶಿವಲಿಂಗಯ್ಯ, ಅರುಣ್ ಇತರರು ಇದ್ದರು.