ಕುಕನೂರು: ದೇಶದ ಮಹನೀಯರು, ವಿಚಾರವಂತವರು, ತಪಸ್ವಿಗಳು ಹಾಗೂ ಹೋರಾಟಗಾರರನ್ನು ಜಾತಿ ಹೆಸರಿನಲ್ಲಿ ಅಳೆಯಬಾರದು ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ಇದನ್ನೂ ಓದಿ:ಬುದ್ಧನ ಆದರ್ಶ ಪಾಲನೆಯಿಂದ ಚೈತನ್ಯ
ಪಟ್ಟಣದಲ್ಲಿ ತಾಲೂಕು ಲಿಂಗಾಯತ ಪಂಚಮಸಾಲಿ ಸಮಾಜದಿಂದ ಶುಕ್ರವಾರ ಹಮ್ಮಿಕೊಂಡಿದ್ದ ವೀರರಾಣಿ ಕಿತ್ತೂರು ಚನ್ನಮ್ಮ ಪ್ರತಿಮೆ ಪ್ರತಿಷ್ಠಾಪನೆಗೆ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಚನ್ನಮ್ಮ ಆದಿಯಾಗಿ ಸಮಸಮಾಜಕ್ಕೆ ಶ್ರಮಿಸಿದವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ರಾಜ್ಯ ಸರ್ಕಾರ ಜನಗಣತಿಯನ್ನು ಮರು ಸರ್ವೇ ಮಾಡುತ್ತದೆ. ಕಾಂತರಾಜ್ ವರದಿ ಬಗ್ಗೆ ನನಗೆ ಯಾವುದೇ ತಕರಾರು ಇಲ್ಲ. ಆದರೆ, ಕೆಲವು ತಿದ್ದುಪಡಿಗಳು ಇರುವ ಬಗ್ಗೆ ಸಿಎಂ ಜತೆ ಚರ್ಚಿಸಿದ್ದೆ ಆದ್ದರಿಂದ ಅವರು ಸರ್ಕಾರದಿಂದ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗಳನ್ನು ಸರ್ವೇ ಕೈಗೊಳ್ಳಲು ಮುಂದಾಗಿದ್ದಾರೆ. ಲಿಂಗಾಯತರು ಮೂಲ ಜಾತಿಯನ್ನು ನಮೂದಿಬೇಕು. 1.20 ಕೋಟಿ ಲಿಂಗಾಯತರಿದ್ದಾರೆ. ಉದ್ಯೋಗ ಹಾಗೂ ಶೈಕ್ಷಣಿಕ ಸರ್ವೇಯನ್ನು ಕಾನೂನು ಬದ್ಧವಾಗಿ ಮಾಡಲಾಗುತ್ತದೆ. ವೈಯಕ್ತಿಕವಾಗಿ ರಾಣಿ ಚನ್ನಮ್ಮ ಕಂಚಿನ ಪ್ರತಿಮೆ ಪ್ರತಿಷ್ಠಾಪನೆಗೆ 5 ಲಕ್ಷ ರೂ. ನೀಡಲಾಗುವುದು ಎಂದರು.
ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ವೀರರಾಣಿ ಕಿತ್ತೂರ ಚನ್ನಮ್ಮ ವಂಶಸ್ಥರು 164 ವರ್ಷಗಳ ಕಾಲ ರಾಜ್ಯಭಾರ ಮಾಡಿದ್ದಾರೆ. ಇಂಥ ಧೈರ್ಯವಂತ ಮಹಿಳೆ ಕೇವಲ ಪಂಚಮಸಾಲಿ ಸಮಾಜಕ್ಕೆ ಸೀಮಿತವಾಗಿಲ್ಲ. ಕಂಚಿನ ಪ್ರತಿಮೆ ಸ್ಥಾಪನೆಗೆ ವೈಯಕ್ತಿಕವಾಗಿ 2 ಲಕ್ಷ ರೂ. ನೀಡುವುದಾಗಿ ಘೋಷಿಸಿದರು.
ಕೂಡಲಸಂಗಮದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ರಾಣಿ ಚನ್ನಮ್ಮ ಪ್ರತಿಮೆಯನ್ನು ಸ್ಫೂರ್ತಿ ಹೆಚ್ಚುವ ಉದ್ದೇಶದಿಂದ ನಿರ್ಮಿಸಲಾಗುವತ್ತಿದೆ. ಸಮಾಜದವರಿಗೆ 2ಎ ಮೀಸಲಾತಿ ಪ್ರಮಾಣಪತ್ರ ಸಿಗುವವರೆಗೂ ಹೋರಾಟ ಮಾಡುತ್ತೇವೆ. ಮುಂದಿಟ್ಟ ಹೆಜ್ಜೆ ಹಿಂದಕ್ಕೆ ಸರಿಸುವ ಮಾತಿಲ್ಲ. ನನ್ನ ಜೋಳಿಗೆಯಿಂದ ಮೂರ್ತಿ ನಿರ್ಮಾಣಕ್ಕೆ 50 ಸಾವಿರ ರೂ. ನೀಡುತ್ತೇನೆ ಎಂದು ತಿಳಿಸಿದರು.
ಸಮಾಜದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ್, ಜಿಲ್ಲಾಧ್ಯಕ್ಷ ಬಸನಗೌಡ ತೊಂಡಿಹಾಳ, ತಾಲೂಕಾಧ್ಯಕ್ಷ ವೀರಣ್ಣ ಅಣ್ಣಿಗೇರಿ, ಬಿಜೆಪಿ ಮುಖಂಡ ಡಾ.ಬಸವರಾಜ ಕ್ಯಾವಟರ್, ಪ್ರಮುಖರಾದ ಅಂದಪ್ಪ ಜವಳಿ, ಕಳಕಪ್ಪ ಕಂಬಳಿ, ವಿನಾಯಕ ಬೆನ್ನಳ್ಳಿ, ಉಮಾ ಆರೇರ್, ಗವಿಸಿದ್ದಪ್ಪ ಆರೇರ, ಈಶಪ್ಪ ಆರೇರ, ಕೆರೆಬಸಪ್ಪ ನಿಡಗುಂದಿ, ಹನುಮಂತಗೌಡ ಚಂಡೂರು, ಸಂತೋಷ ಬನ್ನಿಕೊಪ್ಪ, ಪಪಂ ಉಪಾಧ್ಯಕ್ಷ ಪ್ರಶಾಂತ್ ಆರುಬೆರಳ್ಳಿನ್, ಲಕ್ಷ್ಮೀ ವೀರೇಶ ಸಬರದ್, ಚಂದ್ರು ಬಗನಾಳ, ರಾಮನಗೌಡ ಹುಚನೂರು, ವೀರೇಶ ಸಬರದ, ಮಲ್ಲಿಕಾರ್ಜುನ ಕುಡ್ಲೂರು, ಮಂಜುನಾಥ ಸೋಂಪೂರ ಇತರರಿದ್ದರು.