ರಾಮನಗರ: ಹೆಸರು ಬದಲಾವಣೆ ರಾಜಕಾರಣಕ್ಕೆ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸಂಸದ ಡಾ.ಸಿ.ಎನ್.ಮಂಜುನಾಥ್ ಅವರ ಪ್ರವೇಶವೂ ಆಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯುವ ಮೂಲಕ ಹೆಸರು ಬದಲಾವಣೆ ಮಾಡದಂತೆ ಮನವಿ ಮಾಡಿದ್ದಾರೆ.
ಈ ಕುರಿತಂತೆ ಜು.11ರಂದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎರಡು ಪುಟಗಳ ಪತ್ರವನ್ನು ಬರೆದಿರುವ ಡಾ.ಸಿಎನ್‌ಎಂ,
ತನ್ನದೇ ಆದ ಉನ್ನತ ಇತಿಹಾಸ ಇರುವ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕಾರಣ ಮಾಡಬಾರದು ಎಂದಿದ್ದಾರೆ. ರಾಮನಗರಕ್ಕೆ ಭಾವನಾನ್ಮಕ, ಐಸಿಹಾಸಿಕ, ಪೌರಾಣಿಕ ಇತಿಹಾಸವಿದೆ. ಕ್ಲೋಸ್‌ಪೇಟೆಯನ್ನು ರಾಮನಗರ ಎಂದು ಮರು ನಾಮಕರಣ ಮಾಡಿದವರು ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರು.
ಇಷ್ಟೇ ಅಲ್ಲದೆ, ರಾಮನಗರ ಜಿಲ್ಲೆ ಶ್ರೀ ಡಾ.ಶಿವಕುಮಾರಸ್ವಾಮೀ, ಶ್ರೀ ಡಾ.ಬಾಲಗಂಗಾಧರನಾಥ ಸ್ವಾಮೀಜಿ, ನಾಡಪ್ರಭು ಕೆಂಪೇಗೌಡರಿಗೆ ಜನ್ಮ ನೀಡಿದ ಜಿಲ್ಲೆ. ಇಷ್ಟೇ ಅಲ್ಲದೆ, ಕೆಂಗಲ್ ಹನುಮಂತಯ್ಯ, ರಾಮಕೃಷ್ಣ ಹೆಗ್ಗಡೆ, ಎಚ್.ಡಿ.ದೇವೇಗೌಡ, ಎಚ್.ಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ ಜಿಲ್ಲೆ. ತನ್ನ ವನವಾಸದ ಅವಧಿಯಲ್ಲಿ ರಾಮ ರಾಮಗಿರಿಯಲ್ಲಿ ತಂಗಿದ್ದ ಪುರಾಣವೂ ಇದೆ. ಇಷ್ಟೇ ಅಲ್ಲದೆ, ಹಲವಾರು ಮಹಾನ್ ಋಷಿಗಳು ತಪಸ್ಸು ಮಾಡಿದ ಜಿಲ್ಲೆ ರಾಮನಗರವಾಗಿದ್ದು, ಈ ಜಿಲ್ಲೆಗೆ ರಾಮನಗರದ ಹೆಸರೇ ರಕ್ಷಾ ಕವಚದಂತಿದೆ ಎಂದು ತಮ್ಮ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಅಷ್ಟೇ ಅಲ್ಲದೆ, ಈಗಾಗಲೇ ಬೆಂಗಳೂರು ದಕ್ಷಿಣ ಎಂಬ ವಿಧಾನ ಸಭಾ ಕ್ಷೇತ್ರವೂ ಇದ್ದು, ಈಗ ಮತ್ತೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡಿದರೆ ಜನರಿಗೆ ಗೊಂದಲ ಸೃಷ್ಠಿ ಆಗುತ್ತದೆ. ಅಲ್ಲದೆ ಮುಂದಿನ ದಿನಗಳಲ್ಲಿ ಕೋಲಾರಕ್ಕೆ ಬೆಂಗಳೂರು ಪೂರ್ವ ಜಿಲ್ಲೆ ಎಂದೂ ಚಿಕ್ಕಬಳ್ಳಾಪುರಕ್ಕೆ ಬೆಂಗಳೂರು ಉತ್ತರ ಜಿಲ್ಲೆ ಎಂದು ಮರು ನಾಮಕರಣ ಮಾಡಿ ಎನ್ನುವ ಪ್ರಸ್ತಾವನೆ ಬಂದರೆ ಸರ್ಕಾರಕ್ಕೆ ಮುಜುಗರವಾಗುತ್ತದೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ರಾಮನಗರಕ್ಕೆ ಬೆಂಗಳೂರು ದಕ್ಷಿಣ ಎಂದು ಮರು ನಾಮಕರಣ ಮಾಡಬಾರದು ಎಂದು ಒತ್ತಾಯಿಸಿದ್ದಾರೆ.
ಹೆಸರು ಬದಲಾವಣೆ ಮಾಡಲು ಹೊರಟಿರುವವರಿಗೆ ಪತ್ರದ ಮೂಲಕವೇ ತಿರುಗೇಟು ನೀಡಿರುವ ಮಂಜುನಾಥ್ ಅವರು, ಅಭಿವೃದ್ಧಿ ದೃಷ್ಠಿಯಿಂದ ಮರು ನಾಮಕರಣ ಮಾಡುವ ಬದಲು ರಾಮನಗರವನ್ನೇ ಬ್ರಾಂಡ್ ರಾಮನಗರವನ್ನಾಗಿ ಮಾಡಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಡಬಹುದಾಗಿದೆ ಎಂದಿದ್ದಾರೆ.
ಅಷ್ಟೇ ಅಲ್ಲದೆ, ರಾಮನಗರ ಜಿಲ್ಲೆ ಜಿಲ್ಲೆಯಾಗಿಯೇ ಉಳಿಯಬೇಕೆ ಹೊರತು, ರಿಯಲ್ ಎಸ್ಟೇಟ್ ಬಿಲ್ಡರ್‌ಗಳ ತಾಣವಾಗಿ ಉಳಿಯಬಾರದು. ರೈತರ ಭೂಮಿಯ ಬೆಲೆ ಅಧಿಕವಾಗುವುದಕ್ಕಿಂತ ಅವರು ಬೆಳೆದ ಬೆಳೆಗೆ ಅಧಿಕ ಬೆಲೆ ಸಿಗುವಂತೆ ಮಾಡುವಂತೆ ಮುಖ್ಯಮಂತ್ರಿಯಲ್ಲಿ ಮನವಿ ಮಾಡಿದ್ದಾರೆ.