ಚಿಕ್ಕಮಗಳೂರು: ಅನ್ನ ಕೊಡುವ ರೈತರನ್ನು ಅನಾಥರನ್ನಾಗಿ ಮಾಡಬೇಡಿ. ಮೋಸ, ಸುಳ್ಳು, ಕಪಟಗಳಿಗೆ ಸೌಂದರ್ಯ ರೂಪ ನೀಡಿ ಸುಳ್ಳುಗಳನ್ನೇ ಸತ್ಯ ಎಂಬಂತೆ ನಂಬಿಸುವ ವಿಕೃತ ಕೆಲಸವನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ ಎಂದು ರಂಗಕರ್ಮಿ ಜನ್ನಿ ಕಳವಳ ವ್ಯಕ್ತಪಡಿಸಿದರು.
ಕುವೆಂಪು ರಂಗಮಂದಿರದಲ್ಲಿ ಕ್ಯಾತನಬೀಡು ಪ್ರತಿಷ್ಠಾನ, ಕರ್ನಾಟಕ ರಾಜ್ಯ ರೈತ ಸಂಘ, ಸಮಾನ ಮನಸ್ಕರ ವೇದಿಕೆಯಿಂದ ಆಯೋಜಿಸಿದ್ದ ರೈತ ಹೋರಾಟಗಾರ ಪ್ರೊ. ನಂಜುಂಡಸ್ವಾಮಿ ಜೀವನ ಆಧಾರಿತ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಪ್ರಕೃತಿಯೊಳಗೆ ಬದುಕಬೇಕಿರುವ ಮನುಷ್ಯ ವಿಕೃತಿಯಿಂದ ಮೆರೆಯುತ್ತಿದ್ದಾನೆ. ಇದರ ಪರಿಣಾಮ ತನ್ನನ್ನು ತಾನು ಕಳೆದುಕೊಳ್ಳುವ ಆತಂಕ ಎದುರಾಗಿದೆ ಎಂದರು.
ದಲಿತ, ರೈತ, ಕಮ್ಯುನಿಸ್ಟ್ ಸಮಾಜಮುಖಿ ಚಳವಳಿಗಾರರು ಸ್ವಾರ್ಥ ಮರೆತು ಸಮಾನತೆಗಾಗಿ ನಗ್ನ ಸತ್ಯಗಳನ್ನು ಮುಂದಿಟ್ಟುಕೊಂಡು ಡೈರೆಕ್ಟ್ ಆಕ್ಷನ್‌ಗೆ ಹೋಗಬೇಕಾದ ಅನಿವಾರ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರೊ. ನಂಜುಂಡ ಸ್ವಾಮಿ ಅವರ ಮಗ ಪಚ್ಚೆ ಮಾತನಾಡಿ, ರೈತ ಸಂಘದ ಉದಯವಾಗಿದ್ದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಂಬುದು ಹೆಮ್ಮೆಯ ಸಂಗತಿ. ಪೂರ್ಣಚಂದ್ರ ತೇಜಸ್ವಿ, ನಂಜುಂಡ ಸ್ವಾಮಿ ಅವರ ಚಿಂತನೆ ಫಲವಾಗಿ ರೈತ ಸಂಘ ಹುಟ್ಟಿತು. ಅನೇಕ ರೈತ ಮುಖಂಡರ ಚಳವಳಿಗಳಿಂದಾಗಿ ಹೆಮ್ಮರವಾಗಿ ಬೆಳೆದು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ. ನರಗುಂದ ಹಾಗೂ ನವಲಗುಂದದಲ್ಲಿ ರೈತರ ಬಲಿದಾನದ ಬಳಿಕ ರೈತ ಸಂಘಟನೆಯ ಚಳವಳಿಗೆ ಹೊಸ ರೂಪ ಬಂದಿತು ಎಂದು ಹುತಾತ್ಮ ರೈತರನ್ನು ನೆನಪು ಮಾಡಿಕೊಂಡರು.
ಅಂಕಣಕಾರ ಚಂದ್ರೇಗೌಡ, ಪ್ರಮುಖರಾದ ರವೀಶ್ ಕ್ಯಾತನಬೀಡು, ಎಚ್.ಎಚ್.ದೇವರಾಜ್, ಕೆ.ಟಿ.ರಾಧಾಕೃಷ್ಣ, ಎಂ. ಎಲ್.ಮೂರ್ತಿ, ಕೃಷ್ಣೇಗೌಡ, ವೈ.ಜೆ.ಅಶೋಕ್, ರೇಖಾ ಹುಲಿಯಪ್ಪಗೌಡ, ಶಿವಾನಂದ ಸ್ವಾಮಿ, ಮರ್ಲೆ ಅಣ್ಣಯ್ಯ, ಕೂದುವಳ್ಳಿ ಮಂಜು ಇತರರಿದ್ದರು.