ಜಿಲ್ಲೆ

ರೈತರನ್ನು ಉಪವಾಸ ಕೂರುವಂತೆ ಮಾಡಬೇಡಿ

ತುಮಕೂರು ಡೆಸ್ಕ್

ಆರ್ಯವೈಶ್ಯ ಮಹಾಸಭಾದ ಜಿಲ್ಲಾಧ್ಯಕ್ಷ ಎಲ್​.ಆರ್​.ಚಂದ್ರಶೇಖರ್​ ಬೆಂಬಲ

 ಹುಳಿಯಾರು : ನಾವೆಲ್ಲರೂ ಮೂರೊತ್ತು ಹೊಟ್ಟೆ ತುಂಬ ಊಟ ಮಾಡಲು ರೈತ ಕಾರಣ. ಆತ ಬೇಸಾಯ ಕೈ ಬಿಟ್ಟರೆ ಎಲ್ಲರೂ ಉಪವಾಸ ಇರಬೇಕಾಗುತ್ತದೆ ಎಂದು ಆರ್ಯವೈಶ್ಯ ಮಹಾಸಭಾದ ಜಿಲ್ಲಾಧ್ಯಕ್ಷ ಹುಳಿಯಾರಿನ ಎಲ್​.ಆರ್​.ಚಂದ್ರಶೇಖರ್​ ತಿಳಿಸಿದರು.

ಹುಳಿಯಾರು ಪಪಂ ಕಚೇರಿ ಆವರಣದಲ್ಲಿ ಸಂತೆ ಮೈದಾನದಲ್ಲಿ ಮೂಲ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಅಹೋರಾತ್ರಿ ಧರಣೆಗೆ ಬೆಂಬಲ ಸೂಚಿಸಿ ಮಾತನಾಡಿ, ರೈತ ತಾನು ಬೆಳೆದ ಬೆಳೆಯನ್ನು ನೆಮ್ಮದಿಯಿಂದ ಮಾರಲು ಒಂದಿಷ್ಟು ಜಾಗ ಕೇಳುತ್ತಿದ್ದಾನೆ ಅಷ್ಟೆ. ಇಂತಹ ಸಣ್ಣ ಬೇಡಿಕೆ ಈಡೇರಿಸಲಾಗದೆ 10 ದಿನಗಳಿಂದ ಧರಣಿ ಕೂರಿಸಿರುವುದು ಹಾಗೂ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಲು ಮನಸ್ಸು ಮಾಡಿರುವುದು ಜಿಲ್ಲಾಡಳಿತಕ್ಕೆ ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಪಿಎಂಸಿ ಇರುವುದೇ ಕೃಷಿ ಉತ್ಪನ್ನಗಳನ್ನು ರೈತರು ಬಂದು ವ್ಯಾಪರ ಮಾಡಲು. ಹಾಗಾಗಿಯೇ ರಾಜ್ಯದ ಅನೇಕ ಕಡೆಗಳಲ್ಲಿ ರೈತರು ತಾವು ಬೆಳೆದ ತರಕಾರಿ, ಹಣ್ಣು, ಸೊಪು$್ಪ ತಂದು ಎಪಿಎಂಸಿಯಲ್ಲಿ ಮಾರುತ್ತಿದ್ದಾರೆ. ಹುಳಿಯಾರಿನಲ್ಲಿ ಹಾಲಿ ನಡೆಯುತ್ತಿರುವ ವಾರದ ಸಂತೆ ಜಾಗದಲ್ಲಿ ಆಸ್ಪತ್ರೆ, ಪಶು ಆಸ್ಪತ್ರೆ, ಶಾಲೆ, ದೇವಸ್ಥಾನ ಇದೆ. ಸಂತೆ ನಡೆಯುವ ಸಂದರ್ಭದಲ್ಲಿ ಈ ಕೇಂದ್ರಗಳಿಗೆ ಸಮಸ್ಯೆಯಾಗುತ್ತದೆ. ಹಾಗಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಸಂತೆಯನ್ನು ಬೇರೆಡೆ ವರ್ಗಾಯಿಸುವುದು ಒಳಿತು ಎಂದು ಅಭಿಪ್ರಾಯಪಟ್ಟರು.

ಮುಖಂಡರಾದ ನೀರಾ ಈರಣ್ಣ, ಓಂಕಾರಮ್ಮ, ಟಿ.ಎನ್​.ಶಿವಣ್ಣ, ಜಗದೀಶ್​, ಕುಮಾರ್​, ಚಂದ್ರಶೇಖರ್​, ತಿಮ್ಮಣ್ಣ, ಮಂಜುನಾಥ್​, ನಿಂಗಪ್ಪ, ಚಂದ್ರಶೇಖರರಾವ್​, ರಮೇಶ್​, ರೇವಣ್ಣ, ನಿಂಗಪ್ಪ, ಹನುಮಂತರಾಜ್​ ಅರಸ್​, ಶಶಿಧರ್​, ಪೆದ್ದಾಬೋವಿ, ಬಸವರಾಜು, ಮಂಜನಾಯ್ಕ, ಮತ್ತಿತರರು ಇದ್ದರು.