ಜಿಲ್ಲೆ

ಬಾಹ್ಯ ವ್ಯಕ್ತಿ, ಅಪರಾಧಿಗಳಂತೆ ಕಾಣಬೇಡಿ

ಬಸವರಾಜ ವೀರಪ್ಪ ಗರಗ

ಭಟ್ಕಳ: ಅತಿಕ್ರಮಣದಾರರು ಎಲ್ಲೋ ಹೊರಗಿನಿಂದ ಬಂದು ಜಮೀನು ಕಬಳಿಸಿದವರಲ್ಲ, ಇಲ್ಲಿಯ ಹುಟ್ಟಿ ಇಲ್ಲಿಯೇ ಬೆಳೆದು ತಮ್ಮ ಅಗತ್ಯಕ್ಕೋಸ್ಕರ ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿ, ಕೃಷಿ ಮಾಡಿ ಬಂದಿದ್ದಾರೆ. ಅವರನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಾಹ್ಯ ವ್ಯಕ್ತಿಗಳಂತೆ ಯಾವುದೋ ಕೃತ್ಯ ಎಸಗಿದ ಅಪರಾಧಿಗಳಂತೆ ಕಾಣುವುದು ತಪ್ಪು ಎಂದು ಅತಿಕ್ರಮಣ ಹೋರಾಟ ಸಮಿತಿಯ ತಾಲೂಕಾಧ್ಯಕ್ಷ ರಾಮಾ ಮೊಗೇರ ಹೇಳಿದರು.

ತಾಲೂಕಿನ ಹೇರೂರು ಸಭಾಭವನದಲ್ಲಿ ಭಟ್ಕಳ ತಾಲೂಕು ಅತಿಕ್ರಮಣ ಹೋರಾಟಗಾರರ ಸಭೆಯಲ್ಲಿ ಅವರು ಮಾತನಾಡಿದರು. ಈಗಾಗಲೇ ಸಚಿವ ಮಂಕಾಳ ವೈದ್ಯ, ಶಾಸಕ ಆರ್.ವಿ. ದೇಶಪಾಂಡೆ ಹಾಗೂ ಹಿರಿಯರೆಲ್ಲ ಸೇರಿ ಅತಿಕ್ರಮಣದಾರರು ಇರುವಲ್ಲಿ ಅನೇಕರಿಗೆ ಜಿಪಿಎಸ್ ಆಗಿದೆ, ಇನ್ನೂ ಅನೇಕರಿಗೆ ಜಿಪಿಎಸ್ ಮಾಡಿಕೊಡಬೇಕಾಗಿದೆ. ಈ ಬಗ್ಗೆ ಸಚಿವ ಮಂಕಾಳ ವೈದ್ಯ, ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದು ಜಿಪಿಎಸ್ ಮಾಡಿಕೊಡುವ ಭರವಸೆ ದೊರೆತಿರುವುದು ಅನೇಕರಿಗೆ ಅನುಕೂಲವಾಗಲಿದೆ ಎಂದರು.

ಕಸ್ತೂರಿ ರಂಗನ್ ವರದಿಯಿಂದ ಅರಣ್ಯವಾಸಿಗಳಿಗೆ, ಜನವಸತಿ ಇರುವ ಪ್ರದೇಶದಲ್ಲಿ ವಾಸ ಮಾಡುವವರಿಗೂ ತೀವ್ರ ತೊಂದರೆಯಾಗಲಿದೆ. ಈಗಾಗಲೇ ಕಸ್ತೂರಿ ರಂಗನ್ ವರದಿ ತಿರಸ್ಕರಿಸಲು ನಾವು ಮನವಿ ಮಾಡಿದಂತೆ ಕೇಂದ್ರ ಸರ್ಕಾರಕ್ಕೆ ಈಗಾಗಲೇ ರಾಜ್ಯ ಸರ್ಕಾರದಿಂದ ವರದಿ ಹೋಗಿದೆ. ಈ ಬಗ್ಗೆ ಜನರಿಗೆ ಅನುಕೂಲವಾಗುವಂತೆ ವರದಿಯನ್ನು ತಿರಸ್ಕರಿಸಲು ಕೇಂದ್ರದ ಮೇಲೆ ಒತ್ತಡ ತರುವಂತೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಕಂಡು ಮನವಿ ಮಾಡಿದ್ದೇವೆ ಎಂದರು.

ಕಾಡು ಪ್ರಾಣಿಗಳಿಂದ ರೈತರಿಗೆ ಆಗುತ್ತಿರುವ ತೊಂದರೆಗೆ ಅರಣ್ಯಾಧಿಕಾರಿಗಳು ಸ್ಪಂದಿಸಬೇಕು, ನವಿಲು, ಮಂಗ, ಹಂದಿ, ಚಿರತೆ ಸೇರಿ ಅನೇಕ ಕಾಡು ಪ್ರಾಣಿಗಳು ಹಾವಳಿ ಮಾಡುತ್ತಿದ್ದು, ರೈತರು ಬೆಳೆದ ಬೆಳೆ ಕೈಗೆ ಸಿಗುತ್ತಿಲ್ಲ ಎಂದು ದೂರಿದರು. ಈಗಾಗಲೇ ಸಿಂಗಳೀಕ ಪ್ರದೇಶ ಎಂದು ಗುರುತು ಮಾಡಲಾಗಿದ್ದು, ಸಿಂಗಳೀಕದ ಸಂಖ್ಯೆ ಅತಿ ವಿರಳವಾಗಿರುವಾಗ ಈ ರೀತಿ ಪ್ರದೇಶಗಳನ್ನು ಗುರುತಿಸುವ ಅಗತ್ಯವಿತ್ತೇ ಎಂದು ಪ್ರಶ್ನಿಸಿದ ಅವರು, ಅದನ್ನೂ ತಕ್ಷಣವೇ ತೆಗೆದುಹಾಕಬೇಕು ಎಂದು ಆಗ್ರಹಿಸಿದರು.

ಕೃಷಿಕ ಸಮಾಜದ ಅಧ್ಯಕ್ಷ ಶ್ರೀಧರ ಹೆಬ್ಬಾರ್, ಭಾಸ್ಕರ ಮೊಗೇರ, ಸುಲೇಮಾನ್ ಸಾಬ್, ಗಣಪತಿ ನಾಯ್ಕ ಜಾಲಿ ಮಾತನಾಡಿದರು. ಖಯ್ಯೂಮ್ ಸಾಬ್, ನಾಗೇಶ ದೇವಡಿಗ, ಮಂಜುನಾಥ ನಾಯ್ಕ, ಇತರರು ಉಪಸ್ಥಿತರಿದ್ದರು.