ಜಿಲ್ಲೆ

ಶರಣರನ್ನು ಒಂದು ಜಾತಿಗೆ ಸೀಮಿತಿಗೊಳಿಸದಿರಿ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಶರಣರ ಪ್ರತಿ ವಚನಗಳು ಮಾನವೀಯ ಮೌಲ್ಯಗಳನ್ನು ಸಾರುತ್ತಿವೆ. ವಚನಕಾರರಲ್ಲಿ ಅರಿವಿನ ಮಹಾಸ್ಫೋಟ ಆಗಿದ್ದನ್ನು ಕಾಣುತ್ತೇವೆ. ವಚನಕಾರರು ಜಾತ್ಯಾತೀತ, ಭಾಷಾತೀತ, ವರ್ಣಾತೀತ, ಲಿಂಗಾತೀತ ಭೇದಗಳ ಅರಿವು ಮೂಡಿಸಿ ಅರಿವಿನ ಬೆಳಕು ಬೀರಿದ್ದಾರೆ ಎಂದು ಹಿರಿಯ ಉಪನ್ಯಾಸಕ ಡಾ. ವೈ.ಎಂ. ಭಜಂತ್ರಿ ಹೇಳಿದರು.
ನಗರ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಗುರುಪಾದಪ್ಪ ದುಂಡಪ್ಪ ದೊಡವಾಡ ದತ್ತಿ ನಿಮಿತ್ತ ಶನಿವಾರ ಆಯೋಜಿಸಿದ್ದ ಶರಣರ ದೃಷ್ಟಿಯಲ್ಲಿ ಧರ್ಮ ಮತ್ತು ದೇವರು ಕುರಿತು ಉಪನ್ಯಾಸ ನೀಡಿದರು.
ಶರಣರನ್ನು ಸಮಗ್ರ ದೃಷ್ಟಿಯಿಂದ ಕಾಣಬೇಕೆ ಹೊರತು ಸಂಕುಚಿತಗೊಳಿಸಿ ಒಂದು ಜಾತಿಗೆ ಸೀಮಿತಗೊಳಿಸುವುದು ಸಮಂಜಸವಲ್ಲ. ವೈಜ್ಞಾನಿಕ ದೃಷ್ಟಿಕೋನದಿಂದಲೂ ವಚನಕಾರರು ಅನೇಕ ವಚನಗಳನ್ನು ರಚಿಸಿದ್ದನ್ನು ಕಾಣುತ್ತೇವೆ. ದುಡಿದು ಉಣ್ಣುವುದನ್ನು ಕಲಿಸಿ, ಕಾಯಕದಲ್ಲಿ ಕೈಲಾಸ ಕಾಣಬೇಕೆಂದು ಅಪೇಕ್ಷೆ ಪಟ್ಟವರು ಶರಣರು. ಬಸವಣ್ಣನವರ ವಚನಗಳಲ್ಲಿ ವಿಶ್ವಧರ್ಮದ ಪರಿಕಲ್ಪನೆ ಇರುವುದನ್ನು ಕಾಣುತ್ತೇವೆ. ಅಂತೆಯೇ ಇಂದು ವಿದೇಶಗಳಲ್ಲೂ ಶರಣರ ತತ್ವ, ವಿಚಾರಗಳು ಪ್ರಚಾರ, ಪ್ರಸಾರಗೊಳ್ಳುತ್ತಿರುವುದನ್ನು ಕಾಣುತ್ತೇವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಂಕರ ಹಲಗತ್ತಿ ಮಾತನಾಡಿ, ಜಿ.ಜಿ. ದೊಡವಾಡ ಕರ್ನಾಟಕ ವಿದ್ಯಾವರ್ಧಕ ಸಂಘದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಸರಳ ವ್ಯಕ್ತಿತ್ವದ ಅವರ ಮನಸ್ಥಿತಿ ಅಷ್ಟೇ ಉದಾರವಾಗಿತ್ತು. ಎಲ್ಲರನ್ನೂ ಸಮಾನ ದೃಷ್ಟಿಯಿಂದ ಕಾಣುವ ಕಾಯಕ ಯೋಗಿಯಾಗಿದ್ದರು. ಅಂತಹವರು ತಮ್ಮ ತಂದೆಯವರ ಹೆಸರಿನಲ್ಲಿ ದತ್ತಿ ಇಟ್ಟು ಹಿರಿಯರನ್ನು ಸ್ಮರಿಸಿಕೊಳ್ಳುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ದತ್ತಿದಾನಿ ಪರ ಕರಣ ದೊಡವಾಡ ಮಾತನಾಡಿದರು. ಸರಸಾನಂದ ದೊಡವಾಡ, ಗಂಗಾ ದೊಡವಾಡ, ವೀರಣ್ಣ ಒಡ್ಡೀನ, ಡಾ. ಧನವಂತ ಹಾಜವಗೋಳ, ಸಿ.ಎಸ್. ಪಾಟೀಲ, ಸಿದ್ರಾಮ ಲಕ್ಷ್ಮೇಶ್ವರ, ಬಸವರಾಜ ತಾಳಿಕೋಟಿ, ಎಂ.ಬಿ. ಹೆಗ್ಗೇರಿ, ಸುಮಂಗಲಾ ದೊಡವಾಡ, ರಾಜೇಶ್ವರಿ ದೊಡವಾಡ, ಜಯದೇವ ದೊಡವಾಡ, ಶಶಿಭೂಷಣ ದೊಡವಾಡ, ಸದಾ ಯೋಗಿದಾಸ, ಸುಭಾಷ ಹತ್ತಿಕಾಳ, ಇತರರು ಇದ್ದರು.
ಸತೀಶ ತುರಮರಿ ಸ್ವಾಗತಿಸಿದರು. ಗುರು ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಬಸವಪ್ರಭು ಹೊಸಕೇರಿ ವಂದಿಸಿದರು.