ಹೊಸಪೇಟೆ: ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ವೀರ ರಾಣಿ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಪುತ್ಥಳಿ ನಿರ್ಮಾಣಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷ ಜಿ.ಪಿ.ಪಾಟೀಲ್ ಮನವಿ ಮಾಡಿದರು.
ನಗರದ ಸಾಯಿ ಬಾಬಾ ದೇವಸ್ಥಾನದ ಸಮೀಪದ ಡ್ಯಾಂ ರಸ್ತೆಯ ಕಿತ್ತೂರು ರಾಣಿ ಚನ್ನಮ್ಮ ನಾಮಲಕಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಬ್ರಿಟಿಷರು ದೇಶಬಿಟ್ಟು ತೊಲಗಲಿ ಎನ್ನುವ ಕ್ರಾಂತಿಕಾರಿ ಹೋರಾಟದ ಮೂಲಕ ದೇಶದಲ್ಲೇ ಮೊಟ್ಟ ಮೊದಲಿಗೆ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚನ್ನಮ್ಮ ಅವರ ಜಯಂತಿಯನ್ನು ಸರ್ಕಾರದಿಂದ ಆಚರಿಸುವ ಮೂಲಕ ಗೌರವ ಸಮರ್ಪಿಸಿದೆ.
ರಾಣಿ ಚನ್ನಮ್ಮ ಒಂದು ಜಾತಿಗೆ ಸೀಮಿತವಾಗಿಲ್ಲ. ಹೀಗಾಗಿ ನಾಡಿನ ಉದ್ದಗಲಕ್ಕೂ ಸರ್ಕಾರ ರಾಣಿ ಚನ್ನಮ್ಮ ಅವರ ವೃತ್ತಗಳನ್ನು ಸ್ಥಾಪಿಸುತ್ತಿದೆ. ನೂತನ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ರಾಣಿ ಚನ್ನಮ್ಮ ವೃತ್ತದಲ್ಲಿ ಪುತ್ಥಳಿ ಸ್ಥಾಪನೆಯಾಗಬೇಕಿದೆ ಎಂದು ಹೇಳಿದರು.
ನಗರಸಭೆ ಸದಸ್ಯ ಮಂಜುನಾಥ ಮಾತನಾಡಿ, ನಗರದ ಸಿದ್ದಿಪ್ರಿಯ ಕಲ್ಯಾಣ ಮಂಟಪದ ಬಳಿ ವಿಶ್ವಗುರು ಬಸವೇಶ್ವರ ವೃತ್ತ ಹಾಗೂ ಸಾಯಿಬಾಬಾ ದೇವಸ್ಥಾನದ ಬಳಿ ಕಿತ್ತೂರು ರಾಣಿ ಚನ್ನಮ್ಮ ವೃತ್ತ ನಿರ್ಮಾಣಕ್ಕೆ ಈಗಾಗಲೇ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಿದೆ ಎಂದರು.
ರಾಜ್ಯ ಹಿರಿಯ ಉಪಾಧ್ಯಕ್ಷ ಹನಸಿ ಸಿದ್ದೇಶ, ಸಂಘಟನ ಕಾರ್ಯದರ್ಶಿ ಮಲ್ಲಣ್ಣ ಬಮ್ಮಸಾಗರ, ಹೊಸಪೇಟೆ ತಾಲೂಕು ಪ್ರಧಾನ ಕಾರ್ಯದರ್ಶಿ ಬಸಾಪುರ ಬಸವರಾಜ, ವೀರ ಬಸವ, ವಿಶ್ವನಾಥ ಗೌಡ, ಸಿದ್ಲಿಂಗಪ್ಪ, ಸಿದ್ದು ದೇಸಾಯಿ ಇತರರಿದ್ದರು.