ಆಲೂರು: ಸ್ವಾತಂತ್ರೃ ದಿನಾಚರಣೆಯನ್ನು ಒಂದು ದಿನದ ಕಾರ್ಯಕ್ರಮಕ್ಕೆ ಸೀಮಿತಗೊಳಿಸದೆ ಪ್ರತಿನಿತ್ಯ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತಾಗಬೇಕು ಎಂದು ಸಂತ ಜೋಸೆಫ್ ಚರ್ಚ್‌ನ ಧರ್ಮಗುರು ವಂ.ಸ್ವಾಮಿ ಆಲ್ವಿನ್ ಜೋಸೆಫ್ ಡಿಸೋಜ ಹೇಳಿದರು.
ತಾಲೂಕಿನ ಪಾಳ್ಯ ಹೋಬಳಿ ಜೋಸೆಫ್ ನಗರದಲ್ಲಿರುವ ಸಂತ ಜೋಸೆಫ್ ಶಾಲಾ ಆವರಣದಲ್ಲಿ ನಡೆದ 78ನೇ ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಭಾರತ ದೇಶದ ಸ್ವಾತಂತ್ರೃ ಸಂಗ್ರಾಮದಲ್ಲಿ ಮಹಾತ್ಮಗಾಂಧಿ, ಜವಾಹರ್ ಲಾಲ್ ನೆಹರು, ಭಗತ್ ಸಿಂಗ್ ಸೇರಿದಂತೆ ಅನೇಕರು ಬಲಿದಾನರಾಗಿದ್ದಾರೆ. ಭಾರತ ದೇಶವು ವಿಶ್ವದಲ್ಲೇ ಒಂದು ಅಪರೂಪದ ದೇಶವಾಗಿದೆ. ಈ ದಿನವನ್ನು ಎರಡು ಶತಮಾನಗಳ ಬ್ರಿಟಿಷ್ ಆಳ್ವಿಕೆಯಿಂದ ಮುಕ್ತಿ ಪಡೆದ ದಿನವಾಗಿ, ಭಾರತದ ಏಕತೆಯ, ಸಾರ್ವಭೌಮತೆಯ ಪ್ರತೀಕವಾಗಿ ಎಲ್ಲೆಡೆ ತ್ರಿವರ್ಣ ಧ್ವಜಗಳನ್ನು ಹಾರಿಸಲಾಗುತ್ತದೆ. ರಾಷ್ಟ್ರಗೀತೆ, ದೇಶಭಕ್ತಿಗೀತೆಗಳ ಮೊಳಗುವಿಕೆಯೊಂದಿಗೆ, ಭಾರತವನ್ನು ಬ್ರಿಟಿಷರ ದಾಸ್ಯದಿಂದ ಮುಕ್ತಿಗೊಳಿಸಲು ತಮ್ಮ ಬೆವರು, ನೆತ್ತರು ಹರಿಸಿದ ಮಹಾನ್ ನಾಯಕರನ್ನು ಸ್ಮರಿಸಿ, ಅವರ ತ್ಯಾಗ, ಬಲಿದಾನ ಹಾಗೂ ದೇಶಭಕ್ತಿಯನ್ನು ಕೊಂಡಾಡುವ ಕಾರ್ಯಕ್ರಮಗಳು ಎಲ್ಲೆಡೆ ನಡೆಯುತ್ತವೆ. ಎಲ್ಲರೂ ಇದನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗಬೇಕೆಂದು ಕರೆ ನೀಡಿದರು.
ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ ವ್ಯವಸ್ಥಾಪಕಿ ಸಿಸ್ಟರ್ ಲಿಸೀ ಅಬ್ರಹಾಂ ಮಾತನಾಡಿ, ಭಾರತ ದೇಶವು ಸರ್ವಜನಾಂಗದ ಶಾಂತಿಗೆ ಕಾರಣವಾಗಿದೆ. ಭಾರತ ದೇಶದ ಭವ್ಯ ಪರಂಪರೆ, ಇತಿಹಾಸ, ಪದ್ಧತಿ, ಇಲ್ಲಿಯ ಜನ ಜೀವನದ ಪ್ರತಿಯೊಂದನ್ನು ಪ್ರೀತಿಸಿ, ಗೌರವಿಸಿ, ಪರಸ್ಪರ ಸೌಹಾರ್ದತೆಯಿಂದ ಬಾಳಬೇಕೆಂದು ಸಲಹೆ ನೀಡಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಂದ ಪಥ ಸಂಚಲನ ಮೆರವಣಿಗೆ, ಬಳಿಕ ಸಭಾ ಕಾರ್ಯಕ್ರಮ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮುಖ್ಯಶಿಕ್ಷಕಿ ಆಶಾಲತಾ, ಸಹ ಶಿಕ್ಷಕ ಸಂತೋಷ್, ಶೋಭಾ, ಮಲ್ಲಿಕಾ, ಮಿಸ್ಮಿತಾ ವಿನುತಾ, ಸ್ಮಿತಾ, ಮೇಘನಾ, ಪ್ರಿಯಾ, ಸೋಫಿಯಾ, ಯಶೋದಾ, ಎಲಿಜಬೆತ್, ವೇದಾ, ಅಕ್ಷಿತಾ, ಮಾರ್ಗರೇಟ್ ಇತರರು ಇದ್ದರು.