ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆ ಆವರಣದಲ್ಲಿ ತಂಬಾಕು ಹರಾಜು ಪ್ರಕ್ರಿಯೆಗೆ ಸಚಿವ ಕೆ.ವೆಂಕಟೇಶ್ ಚಾಲನೆ ನೀಡಿದರು. ನಿತಿನ್ ವೆಂಕಟೇಶ್, ಡಿ.ಟಿ.ಸ್ವಾಮಿ, ರಹಮತ್ ಜಾನ್ ಬಾಬು ಇತರರು ಇದ್ದಾರೆ. 
ಜಿಲ್ಲೆ

ಬೆಳೆಗಾರರ ನಿರೀಕ್ಷೆಗೆ ಘಾಸಿಯಾಗದಿರಲಿ

ಪಿರಿಯಾಪಟ್ಟಣ: ತಾಲೂಕಿನಲ್ಲಿ ಮುಂಗಾರು ಮಳೆಯ ಅತಿವೃಷ್ಟಿಯಿಂದಾಗಿ ತಂಬಾಕು ಬೆಳೆಗಾರರು ನಷ್ಟ ಅನುಭವಿಸಿದ್ದಾರೆ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್ ತಿಳಿಸಿದರು.

ತಾಲೂಕಿನ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆ ಆವರಣದಲ್ಲಿ ಬುಧವಾರ 2025- 26 ನೇ ಸಾಲಿನ ತಂಬಾಕು ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದರು.

ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಆರಂಭಗೊಳ್ಳುತ್ತಿದ್ದ ತಂಬಾಕು ಹರಾಜು ಪ್ರಕ್ರಿಯೆ ಈ ವರ್ಷ ಅಕ್ಟೋಬರ್‌ನಲ್ಲಿ ಆರಂಭಗೊಳ್ಳುತ್ತಿರುವುದಕ್ಕೆ ಕಾರಣವೇನು ಎಂಬುದು ತಿಳಿದಿಲ್ಲ ಎಂದರು.

ಪ್ರತಿ ವರ್ಷವೂ ಆಂಧ್ರದಲ್ಲಿ ಹರಾಜು ಪ್ರಕ್ರಿಯೆ ಮುಗಿಯದಿದ್ದರೂ ಸಹ ಸೆಪ್ಟೆಂಬರ್ ತಿಂಗಳಿನಲ್ಲಿ ರಾಜ್ಯದಲ್ಲಿ ಹರಾಜು ಪ್ರಕ್ರಿಯೆ ಆರಂಭಗೊಳ್ಳುತ್ತಿತ್ತು. ಈ ವರ್ಷ ವಿಳಂಬವಾಗಿದೆ ಎಂದರು.

ಈ ಹಿಂದೆ ರಾಜ್ಯದಲ್ಲಿ ನೂರು ಮಿಲಿಯನ್‌ಗೂ ಹೆಚ್ಚು ತಂಬಾಕು ಉತ್ಪಾದನೆ ಆಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅಷ್ಟು ಪ್ರಮಾಣದಲ್ಲಿ ತಂಬಾಕು ಉತ್ಪಾದನೆ ಸಾಧ್ಯವಿಲ್ಲ. 65 ರಿಂದ 70 ಮಿಲಿಯನ್ ತಂಬಾಕು ಉತ್ಪಾದನೆ ಆಗಬಹುದು ಅಷ್ಟೇ ಎಂದರು.

ಈ ಬಾರಿ ರಾಜ್ಯದಲ್ಲಿ ಉತ್ತಮ ಗುಣಮಟ್ಟದ ತಂಬಾಕಿನ ಉತ್ಪಾದನೆಯಾಗಿದ್ದು ಒಳ್ಳೆಯ ದರ ಸಿಗುತ್ತದೆ ಎಂದು ರೈತರು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎಂದರು.

ಹರಾಜು ಪ್ರಕ್ರಿಯೆಯ ಆರಂಭದ ದಿನ ಪ್ರತಿ ಕೆಜಿ ತಂಬಾಕಿಗೆ 320 ರೂ. ನೀಡಿ ಖರೀದಿಸಲಾಗಿದೆ. ರೈತರು ಇಷ್ಟು ಮಾತ್ರಕ್ಕೆ ಸಮಾಧಾನರಾಗುತ್ತಾರೆ ಎಂಬ ವಿಶ್ವಾಸವಿಲ್ಲ. ಮುಂದಿನ ದಿನಗಳಲ್ಲಿ ಇನ್ನೂ ದರ ಹೆಚ್ಚಾಗಬಹುದು ಎಂಬ ನಂಬಿಕೆ ಇಟ್ಟುಕೊಂಡು ಹರಾಜಿನಲ್ಲಿ ಭಾಗವಹಿಸುತ್ತಿದ್ದಾರೆ. ರೈತರ ನಿರೀಕ್ಷೆಗಳಿಗೆ ಯಾವುದೇ ಚ್ಯುತಿ ಬಾರದಂತೆ ತಂಬಾಕು ಖರೀದಿ ನಡೆಯಬೇಕು ಎಂದು ಸೂಚನೆ ನೀಡಿದರು.

ಈ ವರ್ಷ ಹಿಂಗಾರು ಮಳೆ ಕೈಕೊಟ್ಟಿದ್ದು ರೈತರು ರಾಗಿ, ಜೋಳ, ದಿನಸಿ ಪದಾರ್ಥಗಳನ್ನು ಬೆಳೆಯಲು ಮಳೆ ಕೊರತೆಯಾಗಿದೆ. ರೈತರು ಮಳೆಯ ನಿರೀಕ್ಷೆಯಲ್ಲಿದ್ದಾರೆ. ಆದರೆ ಸದ್ಯಕ್ಕೆ ಮಳೆಯ ವಾತಾವರಣ ಕಂಡು ಬರುತ್ತಿಲ್ಲ ಎಂದರು.

ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ತಂಬಾಕು ಖರೀದಿದಾರ ಕಂಪನಿಗಳು ರೈತರಿಗೆ ಸಹಾಯವಾಗುವ ನಿಟ್ಟಿನಲ್ಲಿ ಉತ್ತಮ ದರ ನೀಡಿ ತಂಬಾಕು ಬೆಳೆಗಾರರನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕಿದೆ ಎಂದರು.

ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಟಿ.ಸ್ವಾಮಿ, ರಹಮತ್ ಜಾನ್ ಬಾಬು, ತಾಲೂಕು ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ತಂಬಾಕು ಮಂಡಳಿ ಪ್ರಾದೇಶಿಕ ವ್ಯವಸ್ಥಾಪಕ ಬಿ.ಮಾರಣ್ಣ, ಹರಾಜು ಅಧೀಕ್ಷಕ ್ರಜ್ ಭೂಷಣ್, ಮುಖಂಡರಾದ ಅನಿಲ್ ಕುಮಾರ್, ಭೀಮಣ್ಣ ಇತರರು ಇದ್ದರು.