ಸಿಂದಗಿ: ಸಾಮರಸ್ಯದ ಹಬ್ಬ ಗಣೇಶ ಚತುರ್ಥಿಯ ಆಶಯಗಳಿಗೆ ಧಕ್ಕೆ ತರದಂತೆ ಜಾಗ್ರತೆ ವಹಿಸಬೇಕು ಎಂದು ಎಸ್‌ಪಿ ಋಷಿಕೇಶ ಭಗವಾನ ಸೋನಾವನೆ ಸಾರ್ವಜನಿಕ ಗಜಾನನ ಮಂಡಳಿಗಳಿಗೆ ಮನವಿ ಮಾಡಿದರು.
ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಗಜಾನನ ಉತ್ಸವದ ಅಂಗವಾಗಿ ಸೋಮವಾರ ರಾತ್ರಿ ಹಮ್ಮಿಕೊಂಡಿದ್ದ ಶಾಂತಿಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಗಜಾನನ ಮಂಡಳಿಗಳು ಎಚ್ಚರ ವಹಿಸಬೇಕು. ವೇದಿಕೆ ಸ್ಥಳ, ವಿದ್ಯುತ್ ವ್ಯವಸ್ಥೆಯ ಕುರಿತು ಪೊಲೀಸ್ ಇಲಾಖೆ ಎಲ್ಲ ಪರವಾನಿಗೆಗೆ ಏಕಗವಾಕ್ಷಿ ವ್ಯವಸ್ಥೆ ಮಾಡಿದೆ. ಅದರ ಪ್ರಯೋಜನ ಪಡೆದು ಸಂಭ್ರಮದಿಂದ ಹಬ್ಬ ಆಚರಿಸಿರಿ ಎಂದರು.
ಮೆರವಣಿಗೆಯಲ್ಲಿ ಡಿಜೆ ಬಳಸುವಲ್ಲಿ ನ್ಯಾಯಾಲಯವು ಅನೇಕ ನಿಯಮಗಳನ್ನು ಪಾಲಿಸಲು ಸೂಚಿಸಿದೆ. ಅದರ ಸೌಂಡ್ ಹೆಚ್ಚಿಸಿದರೆ ನಗರದಲ್ಲಿನ ವೃದ್ಧರಿಗೆ, ಮಕ್ಕಳಿಗೆ, ಅನಾರೋಗ್ಯದಿಂದ ಬಳಲುವವರಿಗೆ ತೊಂದರೆಯಾಗುತ್ತದೆ. ಡಿಜೆ ಸಾಮರ್ಥ್ಯ ಎಷ್ಟೇ ಇರಲಿ, ನಿಯಮದಂತೆ ಶಬ್ದವಿರಲಿ. ಮೆರವಣಿಗೆ ಮಾರ್ಗದ ಕುರಿತು ಸಿಪಿಐ ಅವರು ಮಂಡಳಿಗಳಿಗೆ ಸೂಕ್ತ ನಿರ್ದೇಶನ ನೀಡುವರು ಎಂದರು.
ಡಿವೈಎಸ್‌ಪಿ ಎಚ್.ಎಸ್. ಜಗದೀಶ ಮಾತನಾಡಿ, ಮೆರವಣಿಗೆ ಮಾರ್ಗಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ. ಮಾರ್ಗದಲ್ಲಿನ ಮರಗಳನ್ನು ತೆರವುಗೊಳಿಸಲು ಆಗುವುದಿಲ್ಲ. ಯಾವುದೇ ವಾದ ವಿವಾದಗಳಿಗೆ ಆದ್ಯತೆ ನೀಡದೇ ಸಮಸ್ಯೆ ಬಂದರೆ 112ಗೆ ಕರೆ ಮಾಡಿ. ಇಲಾಖೆ ನಿಮಗೆ ಸಹಕಾರ ನೀಡುತ್ತದೆ ಎಂದರು.
ನಗರ ಸುಧಾರಣಾ ವೇದಿಕೆಯ ಅಶೋಕ ಅಲ್ಲಾಪುರ ಮಾತನಾಡಿ, ಗಣೇಶ ಹಬ್ಬವೇ ಎಲ್ಲರ ನಡುವಿನ ಸಾಮರಸ್ಯ ಕದಡುತ್ತಿರುವುದು ಯಾಕೆ ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ. ಪೊಲೀಸ್ ಇಲಾಖೆ ಈ ಬಗ್ಗೆ ಎಲ್ಲವನ್ನೂ ವೀಕ್ಷಿಸುತ್ತದೆ. ಸಂಚಾರಿ ಠಾಣೆ ಅವಶ್ಯಕತೆ ಹಾಗೂ 18ವರ್ಷ ಮೇಲ್ಪಟ್ಟ ಯುವಕರಿಗೆ ವಾಹನ ಚಾಲನಾ ಪರವಾನಿಗೆ ನೀಡಲು ಹಬ್ಬದ ನಂತರ ಅಧಿಕಾರಿಗಳು ಚರ್ಚಿಸಲಿ ಎಂದರು.
ಶೈಲಜಾ ಸ್ಥಾವರಮಠ ಮಾತನಾಡಿ, ಇಲಾಖೆಯು ಸಾರ್ವಜನಿಕ ಮಂಡಳಿಗಳು ಉಲ್ಲೇಖಿಸಿದ ಮೆರವಣಿಗೆ ಮಾರ್ಗಗಳಿಗೆ ಅನುಮತಿ ನೀಡುವ ಮೂಲಕ ಸೂಕ್ತ ರಕ್ಷಣೆ ಒದಗಿಸಬೇಕು. ಇಲ್ಲಿ ನಡೆಯುವ ಎಲ್ಲ ಹಬ್ಬಗಳಲ್ಲೂ ಹಿಂದು-ಮುಸ್ಲಿಂ ಸಹೋದರರಂತೆ ಇರುತ್ತಾರೆ. ಗಣೇಶ ಹಬ್ಬದಲ್ಲಿ ಮಾತ್ರ ಮರೆಯಾಗುತ್ತದೆ ಎಂದು ವಿಷಾಧಿಸಿದರು.
ಸಿಪಿಐ ಡಿ. ಹುಲಗಪ್ಪ ವಿವಿಧ ಮಾಹಿತಿ ನೀಡಿದರು. ಶಿವನಗೌಡ ಬಿರಾದಾರ, ಎಂ.ಎ. ಖತೀಬ, ತಹಸೀಲ್ದಾರ್ ಡಾ. ಪ್ರದೀಪಕುಮಾರ ಹಿರೇಮಠ ಮಾತನಾಡಿದರು.
ತಾಪಂ ಇಒ ಬಾಬು ರಾಠೋಡ, ಠಾಣಾಧಿಕಾರಿ ಭೀಮಪ್ಪ ರಬಕವಿ, ಮಹಾದೇವ ಅಂಬಲಿ, ಸುನಂದಾ ಯಂಪೂರೆ, ಇರ್ಫಾನ ಬಾಗವಾನ, ಆನಂದ ಶಾಬಾದಿ, ಮಂಜುನಾಥ ಬಿರಾದಾರ ಇತರರಿದ್ದರು.