ಮಡಿಕೇರಿ: ಕಾಂತಾರವನ್ನು ಸಿನಿಮಾ ಆಗಿ ನೋಡಿ. ಆದರೆ, ಯಾರೊಬ್ಬರು ದೈವ ನಿಂದನೆ ಮಾಡಬೇಡಿ ಎಂದು ದೈವ ಆರಾಧಕರು ಮತ್ತು ದೈವನರ್ತಕರ ಸಂಘದ ಸ್ಥಾಪಕ ಅಧ್ಯಕ್ಷ ಪಿ.ಎಂ.ರವಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಕರಾವಳಿ ಭಾಗದ ದೈವ ಆರಾಧನೆಗೆ ಸಾವಿರಾರು ವರ್ಷದ ಇತಿಹಾಸವಿದೆ. ದೈವ ಆರಾಧನೆಯು ಗುರು ಹಿರಿಯರು ಹಾಕಿಕೊಟ್ಟಿರುವ ಮೂಲನಂಬಿಕೆ ಮೂಲಆಧಾರ ಮೂಲ ಪದ್ಧತಿಯಾಗಿದೆ. ಕಾಂತಾರ ಸಿನಿಮಾದಿಂದ ತುಳುನಾಡಿನ ದೈವ ಆರಾಧನೆಯು ಅದರ ಹಿನ್ನಲೆ ಜಗತ್ತಿಗೆ ಪರಿಚಯ ಆಗಿದ್ದು ಸತ್ಯ. ಆದರೆ, ಸಿನಿಮಾವನ್ನು ಸಿನಿಮಾ ರೀತಿಯಲ್ಲಿ ನೊಡಬೇಕಾದ ಸಿನಿ ಪ್ರೇಕ್ಷಕರು ದೈವವನ್ನು ಅಪಮಾನ ಅಪಹಾಸ್ಯ ನಿಂದನೆ ಮಾಡುವ ಮೂಲಕ ದೈವಾರಾಧನೆ ಮಾಡುವ ದೈವ ನರ್ತನ ಮಾಡುವವರಿಗೆ ಅವಮಾನ ಅಪಚಾರ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ಕಾಂತಾರ ಚಾಪ್ಟರ್‌೧ ಸಿನಿಮಾ ಬಿಡುಗಡೆಗೊಂಡ ನಂತರ ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯ ವಿದೇಶಗಳಲ್ಲಿ ಸಿನಿಮಾ ಬಿಡುಗಡೆಗೊಂಡಿದೆ. ಅನೇಕ ಥಿಯೇಟರ್‌ನಲ್ಲಿ ಸಿನಿಮಾ ಪ್ರದರ್ಶನದ ಸಂದರ್ಭ ದೈವವು ಮೈಮೇಲೆ ಬಂದು ಆವೇಶ ಭರಿತವಾಗಿ ಕಿರುಚುವುದು ವರ್ತಿಸುವುದನ್ನು ಸಾಮಾಜಿಕ ಜಾಲತಾಣದಲ್ಲಿ ನೊಡಿದ್ದೇವೆ. ಆದರು ಕೂಡ ಬುದ್ಧಿಯಿಲ್ಲದ ಕಿಡಿಗೇಡಿಗಳು ಮತ್ತೆ ಮತ್ತೆ ದೈವವನ್ನು ಅಪಮಾನ ಅಪಹಾಸ್ಯ ಮಾಡುವುದಲ್ಲದೆ ಫೇಸ್ಬುಕ್ ಇನ್ಸ್ಟಾಗ್ರಾಂ ಸೇರಿದಂತೆಯ ಇನ್ನು ಅನೇಕ ಸಾಮಾಜಿಕ ಜಾಲತಾಣದಲ್ಲಿ ದೈವನಿಂದನೆ ಆಗುತ್ತಿದೆ. ಇದರಿಂದ ದೈವ ಆರಾಧಕರಿಗೆ ದೈವ ನರ್ತಕರಿಗೆ ನೋವುಂಟಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ಬಾರಿಯು ಕಾಂತರ ಬಿಡುಗಡೆಗೊಂಡ ನಂತರದ ದಿನದಲ್ಲಿ ಶಾಲೆಯ ವಾರ್ಷಿಕೋತ್ಸವ, ಛದ್ಮವೇಷ ಸ್ಪರ್ಧೆ, ಮಕ್ಕಳ ಪ್ರತಿಭಾಕಾರಂಜಿ, ರಂಗೋತ್ಸವ, ಸೇರಿದಂತೆ ಶಾಲ ಕಾಲೇಜುಗಳಲ್ಲಿ ಖಾಸಗಿ ಕಾರ್ಯಕ್ರಮದ ವೇದಿಕೆಗಳಲ್ಲಿ ದೈವ ನರ್ತನ ಕಾರ್ಯಕ್ರಮ ಪ್ರದರ್ಶನ ನಡೆಸುತ್ತಿದ್ದದನ್ನು ಖಂಡಿಸಿದ್ದೇವೆ. ಇನ್ನು ಮುಂದೆಯು ಯಾರು ಇ ರೀತಿಯಲ್ಲಿ ದೈವವನ್ನು ಹಗುರವಾಗಿ ಕಾಣುವುದನ್ನು ಮತ್ತು ಅಪಹಾಸ್ಯ ದೈವದ ನೃತ್ಯವನ್ನು ಮಾಡುವುದನ್ನು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹಾಕುವುದನ್ನು ದೈವ ಆರಾಧಕರು ಮತ್ತು ದೈವ ನರ್ತಕರ ಸಂಘ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.