ಬೆಂಗಳೂರು: ಪ್ರಜಾಪ್ರಭುತ್ವದಲ್ಲಿ ಮತದಾನ ಮಾಡುವುದು ಪ್ರಮುಖ ಪಾತ್ರ ವಹಿಸಲಿದ್ದು, ಮತ ಹಕ್ಕು ಸಿಗುವ ಪ್ರತಿಯೊಬ್ಬರೂ ತಪ್ಪದೇ ತಮ್ಮ ಮತವನ್ನು ಚಲಾಯಿಸಬೇಕು ಎಂದು ಬಿಬಿಎಂಪಿ ದಕ್ಷಿಣ ವಲಯ ಆಯುಕ್ತ ಜಯರಾಮ್ ರಾಯಪುರ ತಿಳಿಸಿದರು.
ನಗರದ ಎನ್.ಆರ್. ಕಾಲೋನಿಯ ಆಚಾರ್ಯ ಪಾಠಶಾಲೆ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಮತದಾರರ ಸಾಕ್ಷರತಾ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾವೆಲ್ಲರೂ ಸ್ವತಂತ್ರ್ಯ ಭಾರತದಲ್ಲಿ ಜನಿಸಿದ್ದು, ಒಳ್ಳೆಯ ಆಡಳಿತ ಹಾಗೂ ಸರ್ಕಾರ ಬೇಕೆಂದರೆ ಉತ್ತಮ ಜನಪ್ರತಿನಿಧಿಗಳನ್ನು ನಾವು ಆಯ್ಕೆ ಮಾಡಬೇಕು. ಈ ಸಂಬಂಧ ಯುವ ಮತದಾರರಲ್ಲಿ ಆಲೋಚನೆ ಮಾಡುವ ಶಕ್ತಿಯಿದ್ದು, ಉತ್ತಮ ಅಭ್ಯರ್ಥಿಗೆ ಮತ ಚಲಾಯಿಸಿ ಒಳ್ಳೆಯ ಜನಪ್ರತಿನಿಧಿಯನ್ನು ಆಯ್ಕೆ ಮಾಡಿ ಉತ್ತಮ ಸಮಾಜವನ್ನು ರೂಪಿಸುವಲ್ಲಿ ಕೈಜೋಡಿಸಬೇಕು ಎಂದು ತಿಳಿಸಿದರು.
‘ಸ್ವೀಪ್’ ಕಾರ್ಯದಡಿ ನಗರದಾದ್ಯಂತ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಲೋಕಸಭಾ ಚುನಾವಣೆ ಬರಲಿದ್ದು, 17-18 ವರ್ಷ ತುಂಬುವ ಎಲ್ಲ ವಿದ್ಯಾರ್ಥಿಗಳು (ಯುವ ಮತದಾರರು) ಈಗಲೇ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. 18 ವರ್ಷ ತುಂಬಿದ ಪ್ರತಿಯೊಬ್ಬ ಯುವ ಮತದಾರರಿಗೂ ಯಾವುದೇ ಧರ್ಮ, ಜಾತಿ ಹಾಗೂ ವರ್ಗವನ್ನು ನೋಡದೆ ಚುನಾಯಿತ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹಕ್ಕನ್ನು ಸಂವಿಧಾನ ನೀಡಿದೆ ಎಂದು ಕಿವಿಮಾತು ಹೇಳಿದರು.
ಚುನಾವಣೆಯಲ್ಲಿ ಯಾರು ಬೇಕಾದರು ಸ್ಪರ್ಧೆ ಮಾಡಬಹುದಾಗಿದ್ದು, ಜನ ಮನ್ನಣೆ/ವಿಶ್ವಾಸವನ್ನು ಪಡೆಯುವವರು ಚುನಾಯಿತ ಪ್ರತಿನಿಧಿಗಳಾಗಲು ಸಾಧ್ಯವಿದೆ. ಚುನಾವಣೆಯಲ್ಲಿ ಪಾಲ್ಗೊಂಡು ಹೆಚ್ಚು ಮತಗಳನ್ನು ಪಡೆಯುವವರು ಜನಪ್ರತಿನಿಧಿಗಳಾಗಿ ಆಯ್ಕೆಯಾಗುತ್ತಾರೆ. ಆಯ್ಕೆಯಾದ ನಂತರ ಜನ ನಿರೀಕ್ಷಿಸಿದ ಕೆಲಸ ಮಾಡದಿದ್ದರೆ 5 ವರ್ಷಗಳ ನಂತರ ಬದಲಾವಣೆ ಮಾಡುವ ಹಕ್ಕು ಪ್ರಜೆಗಳಲ್ಲಿರುತ್ತದೆ ಎಂದು ತಿಳಿಸಿದರು.
ಮತದಾನ ಶೇ.70ಕ್ಕೆ ಹೆಚ್ಚಳದ ಗುರಿ:
ಬೆಂಗಳೂರು ವ್ಯಾಪ್ತಿಯಲ್ಲಿ ಸದ್ಯ ಶೇ.54 ಮಾತ್ರ ಮತದಾನವಾಗುತ್ತಿದೆ. ಅದನ್ನು ಕನಿಷ್ಠ ಶೇ.70ಕ್ಕೆ ಹೆಚ್ಚಳ ಮಾಡಬೇಕಿದೆ. ಅದಕ್ಕೆ ಚುನಾವಣಾ ಆಯೋಗವು ಸಾಕಷ್ಟು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಯುವ ಮತದಾರರು ಮತಪಟ್ಟಿಯಲ್ಲಿ ಸೇರ್ಪಡೆಗೊಳಿಸಿ, ತಪ್ಪದೆ ಮತದಾನ ಚಲಾಯಿಸಬೇಕು ಎಂದು ಜಯರಾಮ್ ರಾಯಪುರ ವಿವರಿಸಿದರು.