ಅಪರಾಧ ತಡೆ ಮಾಸಾಚರಣೆ ನಿಮಿತ್ತ ಮಹಾಲಿಂಗಪುರದ ಜೇಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಠಾಣಾಧಿಕಾರಿ ಕಿರಣ ಸತ್ತಿಗೇರಿ ಮಕ್ಕಳಿಗೆ ಕಾನೂನು ತಿಳಿವಳಿಕೆ ನೀಡಿದರು. ಸಂಸ್ಥೆ ಉಪಾಧ್ಯಕ್ಷ ಶಿವಾನಂದ ತಿಪ್ಪಾ,ನಿರ್ದೇಶಕ ರಮೇಶ ಮುಳವಾಡ ಇದ್ದರು. 
ಜಿಲ್ಲೆ

ಸಮಸ್ಯೆ ಬಿಚ್ಚಿಡಲು ಸಂಕೋಚ ಬೇಡ

Vijayapura - Desk - Gurappa Lokuri

ಮಹಾಲಿಂಗಪುರ: ಯಾವುದೇ ಸಮಸ್ಯೆ ಹೇಳಿಕೊಳ್ಳಲು ಹಿಂಜರಿಯಬೇಡಿ, ಅದರ ಆರಂಭದಲ್ಲೇ ಹೆತ್ತವರು ಅಥವಾ ಶಿಕ್ಷಕರೊಂದಿಗೆ ಹಂಚಿಕೊಳ್ಳಿ ಅಥವಾ ನಮಗೆ ದೂರು ನೀಡಿ ಎಂದು ಪಿಎಸ್‌ಐ ಕಿರಣ ಸತ್ತಿಗೇರಿ ಹೇಳಿದರು.

ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಸ್ಥಳೀಯ ಪೊಲೀಸ್ ಠಾಣೆ ವತಿಯಿಂದ ಜೇಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೆಟ್ಟದಾಗಿ ಸನ್ನೆ ಮಾಡಿದ ಬಗ್ಗೆ ದೂರು ನೀಡಿದರೆ ತಕ್ಷಣ ಆರೋಪಿ ಬಂಧಿಸುವ ಅವಕಾಶವಿದೆ. ನಾನ್‌ಬೇಲೆಬಲ್ ವಾರಂಟ್ ಆಗುತ್ತದೆ. ಆದ್ದರಿಂದ ತಕ್ಷಣ ದೂರು ನೀಡಿ, ಇಲ್ಲದಿದ್ದರೆ ನಿಮಗೆ ಸಮ್ಮತಿ ಇದೆ ಎಂಬ ಗುಮಾನಿ ಮೇಲೆ ಗಂಭೀರ ಹಂತ ತಲುಪುತ್ತದೆ. ಗುಡ್‌ಟಚ್, ಬ್ಯಾಡ್‌ಟಚ್ ಬಗ್ಗೆ ವಿದ್ಯಾರ್ಥಿನಿಯರಿಗೆ ತಿಳಿಸಿದರಲ್ಲದೆ, ತುರ್ತು ಸಂದರ್ಭ ಸಹಾಯವಾಣಿ 112 ಅಥವಾ 1098ಗೆ ಕರೆ ಮಾಡಬೇಕು. ಮಾದಕ ವಸ್ತು, ಸೈಬರ್ ಕ್ರೈಮ್ ಇತ್ಯಾದಿಗಳಿಂದ ದೂರವಿರಬೇಕು ಎಂದರು.

ಸಂಸ್ಥೆ ಉಪಾಧ್ಯಕ್ಷ ಶಿವಾನಂದ ತಿಪ್ಪಾ ಮಾತನಾಡಿ, ಸಾಮಾಜಿಕ ಭದ್ರತೆ, ನಿರ್ಭೀತ ವಾತಾವರಣಕ್ಕೆ ಪೊಲೀಸರ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು.

ಮುಖ್ಯಶಿಕ್ಷಕ ನಾರನಗೌಡ ಉತ್ತಂಗಿ ಮಾತನಾಡಿದರು.

ಸಂಸ್ಥೆ ನಿರ್ದೇಶಕ ರಮೇಶ ಮುಳವಾಡ, ಎಎಸ್‌ಐ ಜೆ.ಜಿ. ಪಾಟೀಲ, ಹೆಡ್‌ಕಾನ್ಸ್‌ಟೆಬಲ್ ವೈ.ವೈ. ಗಚ್ಚನ್ನವರ ಇದ್ದರು. ಸಾಕ್ಷಿ ಗೊಂದಿ ಸಂಗಡಿಗರು ಪ್ರಾರ್ಥಿಸಿದರು. ಲಕ್ಷ್ಮೀ ಅಮಾತಿ ಸ್ವಾಗತಿಸಿದರು. ಅನುಶ್ರೀ ಹುದ್ದಾರ ನಿರೂಪಿಸಿದರು.