ಜಿಲ್ಲೆ

ನೇಹಾ ಹತ್ಯೆ ಆರೋಪಿಗೆ ಜಾಮೀನು ಕೊಡಬೇಡಿ

ಹುಬ್ಬಳ್ಳಿ: ನೇಹಾ ಹಿರೇಮಠ ಹತ್ಯೆ ಆರೋಪಿಗೆ ನ್ಯಾಯಾಲಯ ಜಾಮೀನು ನೀಡಬಾರದು ಹಾಗೂ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಶ್ರೀರಾಮ ಸೇನೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ನಗರದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದವು.

ಬಿವಿಬಿ ಕಾಲೇಜ್‌ನಿಂದ ಮಿನಿವಿಧಾನಸೌಧಕ್ಕೆ ತೆರಳಿದ ಪ್ರತಿಭಟನಾಕಾರರು ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ರವಾನಿಸಿದರು.

ನೇತೃತ್ವ ವಹಿಸಿದ್ದ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಮಾತನಾಡಿ, ನೇಹಾ ಹತ್ಯೆ ಖಂಡಿಸಿ ದೇಶಾದ್ಯಂತ ಪ್ರತಿಭಟನೆ ನಡೆಸಲಾಗಿತ್ತು. ಜಾಮೀನು ನೀಡಬಾರದು, ಆರೋಪಿ ಪರ ವಕಾಲತ್ತು ಮಾಡಬಾರದು, ಆರೋಪಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಆಗ್ರಹಿಸಲಾಗಿತ್ತು. ಆದರೂ ಆರೋಪಿ ಫಯಾಜ್ ಜಾಮೀನು ನೀಡುವಂತೆ ಕೋರಿದ್ದಾನೆ. ನ್ಯಾಯಾಲಯ ಜಾಮೀನು ನೀಡಬಾರದು. ಸರ್ಕಾರ ವಿಶೇಷ ನ್ಯಾಯಾಲಯ ಮೂಲಕ ಫಯಾಜ್‌ಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.

ಸೇನೆ ಧಾರವಾಡ ಜಿಲ್ಲಾಧ್ಯಕ್ಷ ಗಂಗಾಧರ ಕುಲಕರ್ಣಿ, ಪ್ರಮುಖರಾದ ಅಣ್ಣಪ್ಪ ದಿವಟಗಿ, ಮಂಜು ಕಾಟಕರ, ಬಸು ದರ್ಗದ, ಬಸವರಾಜ ಗೌಡರ, ಪೂರ್ಣಿಮಾ ಕಾಡಮ್ಮನವರ, ವೀರಯ್ಯ ಸಾಲಿಮಠ, ಪ್ರವೀಣ ಮಾಳದಕರ, ಮಹಾಂತೇಶ ಟೊಂಗಳಿ, ನಾಗರಾಜ ಸೌತೆಕಾಯಿ ಇತರರು ಇದ್ದರು.