ಪಡುಬಿದ್ರಿ: ಮಾದಕವಸ್ತು ಸೇವಿಸುವುದರಿಂದ ದೇಹಕ್ಕೆ ಭಾರೀ ಅಪಾಯವಿದೆ. ಒಮ್ಮೆ ಈ ವ್ಯಸನಕ್ಕೆ ಬಲಿಬಿದ್ದರೆ ಅದರಿಂದ ಹೊರಗೆ ಬರಲಾಗುವುದಿಲ್ಲ. ಸ್ನೇಹದ ಹೆಸರಲ್ಲಿ ಪ್ರಲೋಭನೆಗೆ ಒಳಗಾಗಬೇಡಿ ಎಂದು ಉಡುಪಿ ಜಿಲ್ಲಾ ಲೋಕಾಯುಕ್ತ ಪ್ರಭಾರ ಡಿವೈಎಸ್ಪಿ ಮಂಜುನಾಥ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಗುರುವಾರ ನಡೆದ ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾದಕವಸ್ತುಗಳಿಗೆ ಬಲಿಬೀಳುವವರಲ್ಲಿ ಹೆಚ್ಚಿನವರು ಹದಿಹರೆಯದ ಮಕ್ಕಳು. ಮಾದಕವಸ್ತು ಮಾರಾಟ ಮಾಡುವವರನ್ನು ಶಿಕ್ಷಿಸಲಾಗುತ್ತದೆ. ಶಾಲಾ ಕಾಲೇಜು ಮಕ್ಕಳು ಅತ್ಯಂತ ಜಾಗ್ರತೆಯಿಂದ ಇದ್ದು ಬೇರೆ ಯಾರಾದರೂ ಮಾದಕವಸ್ತು ಸೇವಿಸುವರನ್ನು ಕಂಡರೆ ತಕ್ಷಣ ಸಂಬಂಧಪಟ್ಟವರಿಗೆ ತಿಳಿಸಿ ಅವರನ್ನು ಸರಿ ದಾರಿಗೆ ತರುವ ಪ್ರಯತ್ನ ಮಾಡಬೇಕು ಎಂದರು.
ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಪ್ರತಿನಿಧಿ ಪ್ರೊ.ನಿತ್ಯಾನಂದ ಮಾತನಾಡಿ, ಐಟಿ ಬಿಟಿಗಿಂತಲೂ ಯಾವುದೇ ದುಶ್ಚಟ ಇಲ್ಲದೆ ಒಳ್ಳೆಯ ಮನುಷ್ಯನಾದರೆ ಅವನು ನಿಜವಾಗಿ ಕಲಿತಂತೆ ಆಗುತ್ತದೆ ಎಂದರು.
ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸಂಜೀವ ನಾಯ್ಕ ಮಾದಕ ವಸ್ತು ವಿರೋಧಿ ಪ್ರತಿಜ್ಞಾ ವಿಧಿ ಬೋಧಿಸಿದರು. ಕನ್ನಡ ಮಾಧ್ಯಮ ಪ್ರೌಢಶಾಲೆ ಮುಖ್ಯಶಿಕ್ಷಕ ಶ್ರೀಕಾಂತ್ ರಾವ್, ಆಂಗ್ಲ ಮಾಧ್ಯಮ ಪ್ರೌಢಶಾಲೆ ಮುಖ್ಯಶಿಕ್ಷಕ ಮಂಜುನಾಥ ಎ.ವಿ.ಉಪಸ್ಥಿತರಿದ್ದರು. ವಿದ್ಯಾರ್ಥಿ ಬೇಬಿ ಜೈನ್ ಸ್ವಾಗತಿಸಿದರು. ಚರಣ್ಯಾ ಅತಿಥಿಗಳನ್ನು ಪರಿಚಯಿಸಿದರು.