ಗುಂಡ್ಲುಪೇಟೆ: ಜಾನುವಾರುಗಳನ್ನು ಅರಣ್ಯದೊಳಗೆ ಮೇಯಿಸಲು ನಿಷೇಧ ಮಾಡಿರುವ ಆದೇಶವನ್ನು ಹಿಂಪಡೆಯುವಂತೆ ಭಾರತೀಯ ಕಿಸಾನ್ ಸಂಘದ ತಾಲೂಕು ಅಧ್ಯಕ್ಷ ಕೆ.ಎಲ್.ಮಹದೇವಸ್ವಾಮಿ ಒತ್ತಾಯಿಸಿದರು. \
ಕಾಡಂಚಿನ ಗ್ರಾಮಗಳ ರೈತರು ಹಲವಾರು ವರ್ಷಗಳಿಂದ ಜಾನುವಾರುಗಳ ಮೇವಿಗೆ ಅರಣ್ಯವನ್ನೇ ಅವಲಂಬಿಸಿದ್ದಾರೆ. ಅಲ್ಲದೆ ಕಾಡುಪ್ರಾಣಿಗಳು ಅರಣ್ಯದಿಂದ ಹೊರಬಂದು ಬೆಳೆಗಳನ್ನು ನಾಶಮಾಡುತ್ತಲೇ ಇವೆ. ಆದರೆ ಅರಣ್ಯ ಇಲಾಖೆಯವರು ವನ್ಯಜೀವಿಗಳು ಹೊರಬರುವುದನ್ನು ತಪ್ಪಿಸುವ ಬದಲು ಅರಣ್ಯ ರಕ್ಷಣೆಯ ನೆಪದಲ್ಲಿ ಅರಣ್ಯ ಪ್ರದೇಶದೊಳಗೆ ಜಾನುವಾರುಗಳನ್ನು ಮೇಯಿಸಲು ನಿಷೇಧ ಹೇರಿರುವ ಆದೇಶ ಸರಿಯಲ್ಲ ಎಂದು ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಸರ್ಕಾರದ ಗೋಮಾಳವನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡು ರೆಸಾರ್ಟ್ ಸೇರಿದಂತೆ ಇತರೆ ವಾಣಿಜ್ಯ ಬಳಕೆಗೆ ಉಪಯೋಗಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗ ರೈತರ ಜೀವನೋಪಯೋಗಕ್ಕಾಗಿ ಹೈನುಗಾರಿಕೆಯನ್ನೆ ಅವಲಂಬಿಸಿರುವ ರೈತರು ಜಾನುವಾರುಗಳ ಮೇವಿಗೆ ಏನು ಮಾಡಬೇಕು ಎಂದು ಪ್ರಶ್ನಿಸಿದರು. ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ನಕಲಿ ಪರಿಸರವಾದಿಗಳ ಒತ್ತಡಕ್ಕೆ ಮಣಿದು ಜಾನುವಾರುಗಳನ್ನು ಮೇಯಿಸಲು ಅವಕಾಶ ನೀಡದಂತೆ ಆದೇಶಿಸಿದ್ದು, ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ಸಿಎಸ್‌ಪಿ ಶಿವಪ್ರಕಾಶ್ ಮಾತನಾಡಿ, ಅರಣ್ಯ ಇಲಾಖೆ ಕಾಡು ಪ್ರಾಣಿಗಳು ಗ್ರಾಮಗಳು ಹಾಗೂ ರೈತರು ಬೆಳೆದಿರುವ ಫಸಲುಗಳನ್ನು ದಾಳಿ ಮಾಡಿ ಜಾನುವಾರುಗಳನ್ನು ಕೊಂದು ಹಾಕುತ್ತಿರುವುದಕ್ಕೆ ಕಡಿವಾಣ ಹಾಕಲಿ. ತಾಲೂಕಿನಲ್ಲಿ ಸಾವಿರಾರು ಎಕರೆ ಗೋಮಾಳ ಒತ್ತುವರಿಯಾಗಿದ್ದು ತಾಲೂಕು ಆಡಳಿತ ಒತ್ತುವರಿ ತೆರವುಗೊಳಿಸುವುದಕ್ಕೆ ಮುಂದಾಗಲಿ ಎಂದು ಒತ್ತಾಯಿಸಿದರು.
ಸಂಘದ ಕಾರ್ಯದರ್ಶಿ ಶಶಿಕುಮಾರ ದೊಡ್ಡತುಪ್ಪೂರು, ಸೋಮಣ್ಣ ಹಕ್ಕಲಪುರ, ಬಸವಣ್ಣ ಕಬ್ಬಳ್ಳಿ, ಮಹದೇವಪ್ಪ ಮಂಗಲ, ಸದಾನಂದ ಕೊಡಸೋಗೆ, ನಾಗೇಶ್ ಮಂಗಲ, ಮಾಲಿಂಗಯ್ಯ, ಮಹದೇವಸ್ವಾಮಿ, ಜಯಕುಮಾರ್ ಬರಟಹಳ್ಳಿ, ಮಂಜುನಾಥ ಹಂಗಳಪುರ, ಶಿವಕುಮಾರ್ ಹಂಗಳಪುರ, ಶಿವಕುಮಾರ್ ಮಲ್ಲಮ್ಮನಹುಂಡಿ, ಮಾದಪ್ಪ ಹಂಗಳಪುರ, ಮಹೇಶ್ ಇದ್ದರು.