oppo_2 
ಜಿಲ್ಲೆ

ಮಕ್ಕಳಿಗೆ ಬೈಕ್ ನೀಡಿದ್ರೆ ದಂಡ, ಜೈಲು : ಕಮಿಷನರ್ ಡಾ.ಶರಣಪ್ಪ ಖಡಕ್ ಎಚ್ಚರಿಕೆ

 ವಿಶೇಷ ಕಾರ್ಯಾಚರಣೆ  ೧೫೪ ಬೈಕ್ ಜಪ್ತಿ | ಸಂಚಾರ ಸುಧಾರಣೆಗೆ ಕಠಿಣ ಕ್ರಮ

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಅಪ್ರಾಪ್ತ ಮಕ್ಕಳಿಗೆ (೧೮ ವರ್ಷಕ್ಕಿಂತ ಕಡಿಮೆ) ಬೈಕ್ ಚಾಲನೆ ನೀಡಿದರೆ ವಾಹನ ಮಾಲಿಕರಿಗೆ ಮೂರು ವರ್ಷ ಜೈಲು ಇಲ್ಲವೇ ೨೫ ಸಾವಿರ ರೂ. ದಂಡ ವಿಧಿಸುವ, ಲೈಸನ್ಸ್ ಇಲ್ಲದವರಿಗೆ ೩ ತಿಂಗಳು ಜೈಲು ಶಿಕ್ಷೆ ಅವಕಾಶವಿದೆ. ನಗರ ವ್ಯಾಪ್ತಿಯಲ್ಲಿ ಅಪ್ರಾಪ್ತರಿಗೆ ಬೈಕ್ ಚಾಲನೆ ನೀಡಿದರೆ ಜಪ್ತಿ ಮಾಡಿ, ದಂಡ ಹಾಕಲಾಗುವುದು ಎಂದು ನಗರದ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ಖಡಕ್ ಎಚ್ಚರಿಕೆ ನೀಡಿದರು.

ನಗರದಲ್ಲಿ ಸಂಚಾರ ಸಮಸ್ಯೆ ಸುಧಾರಣೆಗೆ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದು, ಮೊದಲ ಹಂತವಾಗಿ ಅಪ್ರಾಪ್ತರ ಬೈಕ್ ಚಾಲನೆ, ಸಂಚಾರ ನಿಯಮ ಉಲ್ಲಂಘನೆ, ಕುಡಿದು ವಾಹನ ಚಾಲನೆ ಗುರುತಿಸಿ, ಬೈಕ್ ಜಪ್ತಿ ಮಾಡಿ ದಂಡ ವಿಧಿಸಲಾಗುತ್ತಿದೆ.ಕಳೆದ ಒಂದು ವಾರದಲ್ಲಿ ೧೫೪ ಬೈಕ್ ಜಪ್ತಿ ಮಾಡಲಾಗಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಗರ ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಯಲ್ಲಿ ೨೦೨೨ರಿಂದ ನಡೆಯುತ್ತಿರುವ ಅಪಘಾತಗಳ ವಿಮರ್ಶೆ ಮಾಡಿದಾಗ ವರ್ಷದಿಂದ ವರ್ಷಕ್ಕೆ ಅಪಘಾತ ಹೆಚ್ಚುತ್ತಿದ್ದು, ಶೇ.೫ ಕಡಿಮೆ ಮಾಡಲು ಇಲಾಖೆ ಯಶಸ್ವಿಯಾಗಿದೆ. ಆದರೆ ಪರಿಣಾಮಕಾರಿಯಾಗಿ ಮಾಡಲಾಗುತ್ತಿದೆ. ಈಗಾಗಲೇ ಅಧಿಕಾರಿಗಳ ಸಭೆ, ಬೈಕ್, ಆಟೋ ಚಾಲನೆ ಅವ್ಯವಸ್ಥೆ ನಿರಂತರವಾಗಿ ಸಾಗಿದೆ. ಇದರಲ್ಲಿ ೧೬ರಿಂದ ೧೭ ವರ್ಷದ ಹೆಚ್ಚು ಮಕ್ಕಳಿದ್ದಾರೆ ಎಂದರು.

ಶಾಲೆ, ಕಾಲೇಜುಗಳಲ್ಲಿ ಸಭೆ ನಡೆಸಿ ಜಾಗೃತಿ ಮೂಡಿಸಲಾಗುವುದು. ನಿರಂತರ ಅಭಿಯಾನ ನಡೆಸುತ್ತಿದ್ದು, ಆರಕ್ಷಕರ ಜತೆಗೆ ಪಾಲಕರು, ಶಿಕ್ಷಕರು, ಉಪನ್ಯಾಸಕರು, ಸಾರ್ವಜನಿಕರು ಕೈ ಜೋಡಿಸಿದರೆ ನಗರವನ್ನು ಸಂಚಾರ ಸಮಸ್ಯೆ ಮುಕ್ತ ಮಾಡಬಹುದು. ಇತರ ಇಲಾಖೆಗಳ ಸಹಕಾರದಲ್ಲಿ ಕಾರ್ಯಾಚರಣೆ ನಿರಂತರವಾಗಿ ನಡೆಯಲಿದೆ ಎಂದು ತಿಳಿಸಿದರು.

ಡಿಸಿಪಿಗಳಾದ ಕನ್ನಿಕಾ ಸಿಕ್ರಿವಾಲ್, ಪ್ರವೀಣ ನಾಯಕ ಇತರರಿದ್ದರು.