ಮುಧೋಳ ಕಾನಿಪ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಸಂಗಣ್ಣಗೌಡ ಕಾತರಕಿ ಮಾತನಾಡಿದರು. ನಾಗಪ್ಪ ಅಂಬಿ, ಕರಬಸಯ್ಯ ಹಿರೇಮಠ, ರುದ್ರಪ್ಪ ಅಡವಿ, ಗುರುಪಾದ ಕುಳಲಿ ಮತ್ತಿತರರಿದ್ದರು. 
ಜಿಲ್ಲೆ

ರಾಜಕೀಯ ಬೆರಸದೆ ದೇಶಾಭಿಮಾನ ಮರೆಯಿರಿ

ಮುಧೋಳ: ಕಾಶ್ಮೀರದಲ್ಲಿ ಪ್ರವಾಸಿಗರನ್ನು ಅಮಾನುಷವಾಗಿ ಹತ್ಯೆಗೈದ ಉಗ್ರರ ವಿಷಯದಲ್ಲಿ ಕ್ಷುಲ್ಲಕ ರಾಜಕಾರಣ ಬಿಟ್ಟು ದೇಶಾಭಿಮಾನ ಮೆರೆಯಬೇಕು ಎಂದು ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಸಂಗಣ್ಣಗೌಡ ಪಾಟೀಲ ತಿಳಿಸಿದರು.

ನಗರದ ಕಾನಿಪ ಕಾರ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿಯ ಕುರಿತು ಬಾಗಲಕೋಟೆಯಲ್ಲಿ ಸಚಿವ ಆರ್.ಬಿ. ತಿಮ್ಮಾಪೂರ ಅವರು ನೀಡಿದ ಹೇಳಿಕೆಯನ್ನು ಖಂಡಿಸಿದರು.

‘ಕಾಶ್ಮೀರದ ಪ್ರವಾಸಿಗರ ಮೇಲೆ ನಡೆದ ಭೀಕರ ದಾಳಿಯಲ್ಲಿ ಧರ್ಮ ಮತ್ತು ಬಟ್ಟೆ ಬಿಚ್ಚಿ ನೋಡಿ ಗುಂಡು ಹಾರಿಸುವಷ್ಟು ಸಮಯ ಭಯೋತ್ಪಾದಕರಿಗೆ ಇರುವುದಿಲ್ಲ’ ಎಂದು ಸಚಿವ ತಿಮ್ಮಾಪೂರ ಹೇಳುತ್ತಾರೆ. ಒಂದು ವೇಳೆ ಸಚಿವರೇ ಆ ದಾಳಿಯಲ್ಲಿ ಸಿಲುಕಿಕೊಂಡಿದ್ದರೆ, ಅವರ ಧರ್ಮ ಕೇಳಿಯೇ ಉಗ್ರರು ಗುಂಡು ಹಾರಿಸುತ್ತಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ರಾಜ್ಯ ನಾಯಕ ನಾಗಪ್ಪ ಅಂಬಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಮಾಡದೆ ಸುಖಾ ಸುಮ್ಮನೆ ಎಲ್ಲದರಲ್ಲೂ ರಾಜಕೀಯ ಮಾಡುವುದನ್ನು ಬಿಡಬೇಕು. ಮೊನ್ನೆ ಜಿಲ್ಲಾ ಉಸ್ತುವಾರಿ ಸಚಿವರು ಉದ್ದಟತನದ ಹೇಳಿಕೆ ನೀಡಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ.

ಕಾಂಗ್ರೆಸ್ ನಾಯಕರು ಒಂದು ಕೋಮಿನ ಜನರನ್ನು ಓಲೈಸಲು ದೇಶದ ವಿರುದ್ಧ ಮಾತನಾಡುತ್ತಾರೆ. ಮುಖ್ಯಮಂತ್ರಿಯಾದಿಯಾಗಿ ಹಲವಾರು ಕಾಂಗ್ರೆಸ್ ನಾಯಕರಿಗೆ ದೇಶಕ್ಕಿಂತ ಆ ಕೋಮಿನ ಜನರ ಓಲೈಕೆ ಹೆಚ್ಚಾಗಿದೆ. ಇವರು ದೇಶದ ಸಂವಿಧಾನವನ್ನು ಒಪ್ಪಿಕೊಂಡಿದ್ದರೆ ಇರಲಿ, ಇಲ್ಲದಿದ್ದರೆ ಭಾರತ ದೇಶ ಬಿಟ್ಟು ಹೋಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರಸಭೆ ಸದಸ್ಯ ಮಾಜಿ ಅಧ್ಯಕ್ಷ ಗುರುಪಾದ ಕುಳಲಿ ಮಾತನಾಡಿ, ಇಸ್ರೇಲ್, ರಷ್ಯಾ, ಜಪಾನ್ ಸೇರಿದಂತೆ ವಿವಿಧ ದೇಶಗಳು ಭಾರತದ ಜತೆಗಿರುತ್ತೇವೆ ಎಂದು ವಾಗ್ದಾನ ಮಾಡಿವೆ. ಆದರೆ ಕಾಂಗ್ರೆಸ್ ನಾಯಕರು ಅಲ್ಪಸಂಖ್ಯಾತರ ಓಲೈಕೆಗಾಗಿ ಈ ರೀತಿ ಹೇಳಿಕೆ ನೀಡುವುದು ದೇಶದ್ರೋಹದ ಕೆಲಸ ಎಂದು ವಾಗ್ದಾಳಿ ನಡೆಸಿದರು.

ಜಿಲ್ಲಾ ಉಪಾಧ್ಯಕ್ಷ ಶಂಕರಗೌಡ ಪಾಟೀಲ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಇಂತಹ ಹೇಳಿಕೆಗಳು ದೇಶದ ಐಕ್ಯತೆಗೆ ಧಕ್ಕೆ ತರುವಂತಿದೆ ಎಂದು ಆರೋಪಿಸಿದರು.

ಕರಬಸಯ್ಯ ಹಿರೇಮಠ, ರುದ್ರಪ್ಪ ಅಡವಿ, ಶ್ರೀಶೈಲ ಚಿನ್ನನವರ, ಅನುಪ್ ಚವಾಣ, ರಾಘು ಶಿಂಧೆ ಮತ್ತಿತರರಿದ್ದರು.