Don't get hung up on grades. 
ಜಿಲ್ಲೆ

ಅಂಕಗಳ ಬೆನ್ನು ಹತ್ತಬೇಡಿ

Vijayapura - Desk - Doddanagouda Gudihindin

ಕಲಾದಗಿ: ಅಂಕಗಳ ಬೆನ್ನು ಹತ್ತಬೇಡಿ, ಜ್ಞಾನದ ಬೆನ್ನು ಹತ್ತಿ. ಶಿಕ್ಷಕರು ಬೋಧನೆ ಮಾಡುವಾಗ ಏಕಾಗ್ರತೆ, ಬೋಧನೆಯ ಮರುಕ್ಷಣ ಅದರ ಮನನ, ಮನೆಯಲ್ಲಿ ಸಹಪಾಠಿಗಳೊಂದಿಗೆ ಓದು, ಚರ್ಚೆ, ಕೆಲ ಹೊತ್ತು ಧ್ಯಾನ, ಮಲಗುವಾಗ ಇಡೀ ದಿನದ ಓದಿನ ಪುನರ್ಮನನ.. ಇಷ್ಟನ್ನು ಶ್ರದ್ಧೆಯಿಂದ ಮಾಡಿ ಸಾಕು. ಅದರ ಲಿತಾಂಶ ಖಂಡಿತವಾಗಿಯೂ ಉನ್ನತವಾಗಿರುತ್ತದೆ ಎಂದು ಬಾಗಲಕೋಟೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ಜಿ. ಮಿರ್ಜಿ ಹೇಳಿದರು.

ಗ್ರಾಮದ ಹಣ್ಣು ಬೆಳೆಗಾರರ ವಿದ್ಯಾಸಂಸ್ಥೆಗೆ ಬುಧವಾರ ದಿಢೀರ್ ಭೇಟಿ ನೀಡಿದ ಅವರು, ನೇರವಾಗಿ ಎಸ್‌ಎಸ್‌ಎಲ್‌ಸಿ ತರಗತಿಗೆ ತೆರಳಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಎಂದಿಗೂ ನಿದ್ದೆಗೆಟ್ಟು ಓದಬೇಡಿ, ಮುಖ್ಯವಾಗಿ ಬರೀ ಪುಸ್ತಕದ ಹುಳವಾಗಬೇಡಿ. ಆಟ ಸೇರಿದಂತೆ ಇನ್ನಿತರ ಉತ್ತಮ ಚಟುವಟಿಕೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಅದು ನಿಮ್ಮ ಉತ್ತಮ ಓದಿಗೆ ಪೂರಕವಾಗುತ್ತದೆ ಎಂದರು.

ದೈಹಿಕ, ಮಾನಸಿಕ ಹಾಗೂ ನೈತಿಕವಾಗಿ ಸದೃಢವಾಗಿರುವುದು ನಮ್ಮೆಲ್ಲ ಸಾಧನೆಗೆ ರಹದಾರಿ. ಇದನ್ನು ಜೀವನದಲ್ಲಿ ರೂಢಿಸಿಕೊಳ್ಳಿ. ಯಾರೊಬ್ಬರೂ ದಡ್ಡರಲ್ಲ. ನಾವು ದಡ್ಡರೆಂದು ಯಾರೂ ಭಾವಿಸಬೇಡಿ. ಎಲ್ಲರಲ್ಲೂ ಜಾಣತನವಿದೆ. ಅದನ್ನು ಹೊರಗೆ ತೆಗೆಯುವ ಪರಿಶ್ರಮದ ಪ್ರಾಮಾಣಿಕ ಪ್ರಯತ್ನವನ್ನು ಮಾಡಿ. ನೀವು ಮುಟ್ಟುವ ಗುರಿಯೆಡೆಗೆ ಗಮನವಿರಲಿ. ಅದಕ್ಕೆ ಪೂರಕವಾದ ಪ್ರಯತ್ನ ಮಾಡಿ. ಅದಕ್ಕೆ ಬೇಕಿರುವ ವ್ಯವಸ್ಥೆ ಮಾಡಿಕೊಳ್ಳಿ. ಯಶಸ್ಸು ನಿಮಗೆ ಕಟ್ಟಿಟ್ಟ ಬುತ್ತಿಯಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಮಾರ್ಗದರ್ಶನ ಮಾಡಿದರು.

ಬಿಸಿಊಟ ಪರಿಶೀಲನೆ: ಬಿಸಿಯೂಟ ಪರಿಶೀಲಿಸಿದ ಡಿಡಿಪಿಐ, ಕೆಲ ಮಕ್ಕಳಿಗೆ ಊಟ ಬಡಿಸಿದರು. ಅಕ್ಷರ ದಾಸೋಹ ಯೋಜನೆಯ ಮಹತ್ವವನ್ನು ಮಕ್ಕಳಿಗೆ ತಿಳಿ ಹೇಳಿದರು. ಬಾಗಲಕೋಟೆ ತಾಲೂಕು ಅಕ್ಷರ ದಾಸೋಹ ಯೋಜನಾಧಿಕಾರಿ ನಾಗರಾಜ ದೇಶಪಾಂಡೆ, ಮುಖ್ಯಶಿಕ್ಷಕ ಆರ್.ವಿ. ಜಾಧವ, ಶ್ರೀಕಾಂತ ಕೆರಕಲಮಟ್ಟಿ ಇದ್ದರು.

ಲಿತಾಂಶದ ಸುಧಾರಣೆಗೆ ಕ್ರಮ: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಕಲಿಕಾಮಟ್ಟ ಉತ್ತಮಗೊಳಿಸಲು ರಾಜ್ಯ ಹಾಗೂ ಜಿಲ್ಲಾಮಟ್ಟದ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಭೆ, ಚರ್ಚೆ, ಬೋಧನೆ ವ್ಯವಸ್ಥೆ ಮಾಡಲಾಗಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾಗಿ ವಿಶೇಷ ಕಲಿಕಾ ವ್ಯವಸ್ಥೆ ಮಾಡಿದ್ದೇವೆ. ಪಾಲಕರ ಸಭೆ, ಮನೆಮನೆ ಭೇಟಿ ನಡೆಯಲಿದೆ. ಕಡಿಮೆ ಲಿತಾಂಶ ಬಂದಿರುವ ಶಾಲೆಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ವಿದ್ಯಾರ್ಥಿಗಳು ಹಾಗೂ ಶಾಲೆಗಳನ್ನು ದತ್ತು ತೆಗೆದುಕೊಂಡು ಶಿಕ್ಷಣದ ಗುಣಮಟ್ಟ ಉನ್ನತವಾಗಿಸುವ ಕೆಲಸ ಆರಂಭವಾಗಿದೆ. ಜಿಲ್ಲೆಯ ಎಲ್ಲ ಶಿಕ್ಷಕರು ಈ ನಿಟ್ಟಿನಲ್ಲಿ ಸಮರ್ಥರಿದ್ದಾರೆ ಎಂದು ಡಿಡಿಪಿಐ ಮಿರ್ಜಿ ಹೇಳಿದರು.