ಜಿಲ್ಲೆ

ಜನಪದ ಮೂಲದ ಕಥೆಗಳನ್ನು ಮರೆಯದಿರಿ: ಬಾಚರಣಿಯಂಡ.ಪಿ.ಅಪ್ಪಣ್ಣ

ಮಡಿಕೇರಿ: ಜಾನಪದ ಕಥೆಗಳು ಪ್ರಕೃತಿಯಲ್ಲಿನ ನೈಜ ಪುಪ್ಪಗಳಂತೆ ಸದಾ ಪರಿಮಳ ಬೀರುತ್ತಾ ಕಥಾ ಲೋಕದಲ್ಲಿ ಕಂಗೊಳಿಸುತ್ತದೆ. ಹೀಗಾಗಿ ಜಾನಪದ ಕಥೆಗಳು ಜನರ ಕಥೆಗಳಾಗಿ ಅತ್ಯಂತ ಮಹತ್ವ ಪಡೆಯುತ್ತದೆ. ಜಾನಪದೀಯ ಮೂಲದ ಕಥೆಗಳನ್ನು ಎಂದಿಗೂ ಮರೆಯಬಾರದು ಎಂದು ತ್ರಿಭಾಷಾ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಕಥೆಗಾರರಿಗೆ ಕರೆ ನೀಡಿದರು.

ಕೊಡಗು ಪತ್ರಕರ್ತರ ಸಂಘದ ಆಶ್ರಯದಲ್ಲಿ ವೀರಾಜಪೇಟೆ ತಾಲೂಕು ಪತ್ರಕರ್ತರ ಸಂಘ ಮತ್ತು ಕಾಮಧೇನು ಗೋಶಾಲೆ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಅಮ್ಮತ್ತಿಯ ಕಾವಾಡಿಯಲ್ಲಿನ ಗೋಶಾಲೆ ಆವರಣದಲ್ಲಿ ಆಯೋಜಿಸಿದ್ದ ಕಥಾ ಸಮಯ-ಕಥೆ ಹೇಳುವ ಸ್ಪರ್ಧೆಯ ತೀರ್ಪುಗಾರರಾಗಿ ಅವರು ಮಾತನಾಡಿದರು.

೧೯೪೦ರ ದಶಕದಲ್ಲಿ ಖ್ಯಾತ ಕಲಾವಿದ ಕರೀಂಖಾನ್ ಅವರು ಜಾನಪದ ಕಲೆ, ಸಾಹಿತ್ಯಕ್ಕೆ ಹೊಸ ರೂಪು ನೀಡಿದರು. ಅನಂತರವೇ ಕರ್ನಾಟಕದಲ್ಲಿ ಜಾನಪದ ಕಥೆ, ಕವನಗಳಿಗೆ ಆದ್ಯತೆ ದೊರಕಿತ್ತು ಎಂದು ಬಾಚರಣಿಯಂಡ ಅಪ್ಪಣ್ಣ ಸ್ಮರಿಸಿದರು.

ನಾಡಿನ ಹೆಮ್ಮೆಯ ಕಥೆಗಾರರಾಗಿದ್ದ ಪೂರ್ಣಚಂದ್ರ ತೇಜಸ್ವಿ ನಮ್ಮಿಂದ ಮರೆಯಾಗಿದ್ದರೂ ಅವರ ಸಾಹಿತ್ಯ ಕೃತಿಗಳು ಸದಾ ಲೇಖಕರಿಗೆ ನವಚೈತನ್ಯ ನೀಡುವಂತಿದೆ. ಇಂಥ ಸಾಹಿತ್ಯ ಕೃತಿಗಳನ್ನು ವಿದ್ಯಾರ್ಥಿಗಳು ಹೆಚ್ಚು ಓದಿ ಜ್ಞಾನವಂತರಾಗಬೇಕೆಂದೂ ಅವರು ಕರೆ ನೀಡಿದರು.

ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಟಿ.ಅನಿಲ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮೊಬೈಲ್ ಕಾಲಘಟ್ಟದಲ್ಲಿ ಕಥೆ ಹೇಳಲು ಅಮ್ಮ-ಅಪ್ಪನಿಗೆ ವ್ಯವಧಾನವಿಲ್ಲ. ಕಥೆ ಕೇಳಲೂ ಮೊಬೈಲ್ ಗುಂಗಿನಲ್ಲಿ ಮುಳುಗಿರುವ ಮಕ್ಕಳಿಗೆ ಆಸಕ್ತಿ ಇಲ್ಲದಂತಾಗಿದೆ. ಇಂಥ ಕಾಲದಲ್ಲಿ ಕಥಾ ಸಮಯದಂಥ ಕಾರ್ಯಕ್ರಮಗಳು ಮಕ್ಕಳಲ್ಲಿ ಕಥೆ ಹೇಳುವ ಮತ್ತು ಕಥೆಗಳನ್ನು ಕೇಳುವ ಹೊಸ ಚಿಂತನೆ ಸೃಷ್ಟಿಸುವಂತಾಗಬೇಕು. ಜಾನಪದದ ಕಥೆಯ ಹಾಡಾಗಿರುವ ಧರಣಿ ಮಂಡಲವು ಎಂದೆಂದಿಗೂ ಗೋವುಗಳ ಮಹತ್ವ ಸಾರುತ್ತವೆ. ಕಥಾ ಸಮಯ ಕಾರ್ಯಕ್ರಮ ಗೋಶಾಲೆಯಲ್ಲಿಯೇ ಆಯೋಜಿತವಾಗಿರುವುದು ವಿಶೇಷ ಎಂದು ಅನಿಲ್ ಹೇಳಿದರು.

ಹಿರಿಯ ಲೇಖಕ ಬಾರಿಯಂಡ ಜೋಯಪ್ಪ ಮಾತನಾಡಿ, ಹಳೇ ಕಾಲದಲ್ಲಿ ದಟ್ಟಾರಣ್ಯದ ನಡುವೇ ಒಂಟಿ ಮನೆಗಳಲ್ಲಿ ಜನ ವಾಸವಾಗಿದ್ದರೂ ವನ್ಯಜೀವಿಗಳ ಸಮಸ್ಯೆ ಕಾಡುತ್ತಿರಲಿಲ್ಲ. ಆದರೆ, ಬದಲಾದ ಕಾಲದಲ್ಲಿ ನಾಡಿಗೇ ವನ್ಯಜೀವಿಗಳು ನುಗ್ಗಿ ದಾಂಧಲೆ ಸೃಷ್ಟಿಸುತ್ತಿವೆ. ವನ್ಯಜೀವಿ-ಮಾನವನ ನಡುವಿನ ಸೌಹಾರ್ಧ ಸಂಬಂಧಿತ ಕಥೆಗಳೂ ಇಂದಿನ ಅಗತ್ಯದಂತಿದೆ. ಕಥಾ ಸಮಯದಂಥ ಚಿಂತನೆಗೊಡ್ಡುವ ಕಾರ್ಯಕ್ರಮಗಳು ಅತ್ಯಂತ ಮೌಲ್ಯಯುತವಾಗಿದೆ ಎಂದು ಬಣ್ಣಿಸಿದರು.

ಪತ್ರಕರ್ತ ಮಾಣಿಪಂಡ ಸಂತೋಷ್ ತಮ್ಮಯ್ಯ ಮಾತನಾಡಿ, ಸೃಷ್ಟಿಯ ಪ್ರತೀ ಅಂಶದಲ್ಲಿಯೂ ಒಂದೊಂದು ಕಥೆಯಿದೆ. ಬೇರೊಬ್ಬರ ಕಣ್ಣಲ್ಲಿ ಪ್ರತೀಯೋರ್ವರೂ ಒಂದು ಕಥೆಯಾಗುತ್ತೇವೆ ಎಂದರಲ್ಲದೇ ಕೂಡುಕುಟುಂಬ ಪದ್ದತಿ ಕಡಮೆಯಾಗುತ್ತಿರುವ ಈ ದಿನಗಳಲ್ಲಿ ಮಕ್ಕಳ ಕಥೆಗಳಲ್ಲ ಅಜ್ಜ, ಅಜ್ಜಿ, ದೊಡ್ಡಪ್ಪ, ದೊಡ್ಡಮ್ಮ, ಅತ್ತೆ, ನಾದಿನಿಯ ಪಾತ್ರಗಳೇ ಕಾಣೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಅಂಥ ಸಂಬಂಧಗಳ ಬಗ್ಗೆ ಮಕ್ಕಳಿಗೆ ಗೊತ್ತೇ ಇಲ್ಲದಾದಾಗ ಆ ಪಾತ್ರಗಳನ್ನು ಕಥೆಗಳಲ್ಲಿ ಹೇಗೆ ಸೃಷ್ಟಿಸಲು ಸಾಧ್ಯ ಎಂದು ಕಳವಳ ವ್ಯಕ್ತಪಡಿಸಿದರು.

ಕೊಡಗು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಎಂ.ಪಿ.ಕೇಶವಕಾಮತ್ ಮಾತನಾಡಿ, ಮಕ್ಕಳಿಗೆ ಕಥೆ ಹೇಳುವ ಮತ್ತು ಕೇಳುವ ಆಸಕ್ತಿ ಇಂದಿಗೂ ಉಳಿದುಕೊಂಡಿದೆ. ಪ್ರತೀ ಕಥೆಯಲ್ಲಿಯೂ ಸಂದೇಶ ಹಾಸುಹೊಕ್ಕಾಗಿರಬೇಕು. ಕಥಾ ಸಮಯದಂಥ ಕಾಯ೯ಕ್ರಮಗಳು ವಿದ್ಯಾರ್ಥಿಗಳ ಪಾಲಿಗೆ ಕಥೆ ಬರೆಯುವ ಕಥಾ ಶಿಬಿರಗಳಂತಿರಬೇಕೆಂದು ಹೇಳಿದರು.

ವಿರಾಜಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮುಲ್ಲೇಂಗಡ ಮಧೋಷ್ ಪೂವಯ್ಯ, ಕೊಡಗು ಪತ್ರಕರ್ತರ ಸಂಘದ ಗೌರವ ಸಲಹೆಗಾರ ಬಿ.ಜಿ.ಅನಂತಶಯನ, ಕಾಮಧೇನು ಗೋಶಾಲಾ ಸಂರಕ್ಷಣಾ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಕೆ.ರಾಮಚಂದ್ರ ಭಟ್, ಹಿರಿಯ ಪಕ್ಷಿ ತಜ್ಞ ಡಾ.ಎಸ್.ವಿ.ನರಸಿಂಹನ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕಾಮಧೇನು ಗೋಶಾಲಾ ಸಂರಕ್ಷಣಾ ಟ್ರಸ್ಟ್‌ನ ಟ್ರಸ್ಟಿ ಕೆ.ಕೆ.ಶ್ಯಾಮ, ವಿರಾಜಪೇಟೆ ತಾಲೂಕು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಉಷಾ ಪ್ರೀತಮ್, ಕೊಡಗು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ, ಸಂಘದ ಸದಸ್ಯರು, ಗೋಶಾಲಾ ಸಂರಕ್ಷಣಾ ಟ್ರಸ್ಟ್ ಪ್ರಮುಖರು ಹಾಜರಿದ್ದರು. ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಜರಿದ್ದು ಕಥೆಗಳನ್ನು ವಾಚಿಸಿದ್ದು ವಿಶೇಷವಾಗಿತ್ತು.

ಕಥಾ ಸಮಯ ಸ್ಪರ್ಧಾ ವಿಜೇತರು

ಸಾರ್ವಜನಿಕ ವಿಭಾಗದಲ್ಲಿ ಕಿಗ್ಗಾಲು ಗಿರೀಶ್(ಪ್ರ), ಮೀದೇರೀರ ಕವಿತಾ ರಾಮು(ದ್ವಿ), ಕೂಡಕಂಡಿ ಓಂಶ್ರೀ ದಯಾನಂದ ತೃತೀಯ ಬಹುಮಾನ ಪಡೆದುಕೊಂಡರು. ಕಾಲೇಜು ವಿಭಾಗದಲ್ಲಿ ಮದನ್ ಚೇರಂಬಾಣೆ(ಪ್ರ), ರಾಧಿಕ(ದ್ವಿ), ರಕ್ಷಿತಾ ತೃತೀಯ ಬಹುಮಾನ ಪಡೆದರು. ಪ್ರಾಥಮಿಕ, ಪ್ರೌಢಶಾಲಾ ಶಾಲಾ ವಿಭಾಗದಲ್ಲಿ ಡೀನ್ಸ್ ಸಾಲ್ವೋ ಡಿಸೋಜಾ(ಪ್ರ), ಹಷ್ಮಿತಾ(ದ್ವಿ), ಎಂ.ಪಿ.ತಷ್ಮಿತ ತೃತೀಯ ಬಹುಮಾನ ಪಡೆದರು.