ಕೋಲಾರ: ಕೋಚಿಮುಲ್ ಒಕ್ಕೂಟವನ್ನು 5 ವರ್ಷ ಕಾಲ ಉತ್ತಮವಾಗಿ ನಡೆಸಿದ್ದೇವೆ. ಹಲವು ಯೋಜನೆಗಳ ಕಾರ್ಯಗತಗೊಳಿಸಿದ್ದೇವೆ. ರಾಜ್ಯದಲ್ಲಿಯೇ ಉತ್ತಮ ಒಕ್ಕೂಟ ಎಂದು ಹೆಸರು ಬಂದಿದೆ. ಆದರೆ ಕೆಲವರು ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಕೋಚಿಮುಲ್ ಅಧ್ಯಕ್ಷ ನಂಜೇಗೌಡ ಹೇಳಿದರು.
ಶಾಸಕರ ನಿವಾಸದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಸರ್ಕಾರ ಇದ್ದ ಸಂದರ್ಭದಲ್ಲಿ ಒಕ್ಕೂಟದ ಅಭಿವೃದ್ಧಿ ಕಾರ್ಯಗಳಿಗೆ ಹಲವು ತೊಡುಕು ಎದರಾದರೂ ಅವುಗಳನ್ನು ನಿಭಾಯಿಸಲಾಯಿತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೋಚಿಮುಲ್ ವಿಭಜನೆ ಮಾಡಲಾಗಿದೆ. ಎರಡೂ ಜಿಲ್ಲೆಯ ಶಾಸಕರು ಮತ್ತು ನಿರ್ದೇಶಕರು ಇದಕ್ಕೆ ಸಹಕಾರ ನೀಡಿದ್ದಾರೆ ಎಂದರು.
ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮ ನೀಡಿದರೂ ಮಾಜಿ ನಿರ್ದೇಶಕರಾದ ಕಾಡೇನಹಳ್ಳಿ ನಾಗರಾಜ್ ಮತ್ತು ಡಿ.ವಿ.ಹರೀಶ್ ಆಡಳಿತ ಮಂಡಳಿ ಬಗ್ಗೆ ಹಗುರವಾಗಿ ಮಾತನಾಡಿರುವುದು ಮತ್ತು ಒಕ್ಕೂಟದ ಎಂ.ಡಿ.ಗೋಪಾಲಮೂರ್ತಿ ವಿರುದ್ಧ ಅಸಭ್ಯವಾಗಿ ವರ್ತಿಸಿರುವುದನ್ನು ಸಹಿಸುವುದಿಲ್ಲ ಎಂದರು.
ಸೋಲಾರ್ ಪ್ಲಾಂಟ್, ಎಂ.ವಿ.ಕೆ.ಗೋಲ್ಡನ್ ಡೇರಿ, ವಸತಿ ನಿಲಯ, ಹಾಲು ಉತ್ಪಾದಕರಿಗೆ ಹೆಚ್ಚಿನ ಬೆಲೆ, ಸೌಲಭ್ಯ ನೀಡುವಲ್ಲಿ ಎಲ್ಲರೂ ಒಟ್ಟಿಗೆ ಸೇರಿ ಅನುಮೋದನೆ ನೀಡಿದ್ದೇವೆ. ರಾಜ್ಯದಲ್ಲಿ ಉತ್ತಮ ಆಡಳಿತ ಮಂಡಳಿ ಎಂದು ಕೀರ್ತಿ ಪಡೆಯುವಲ್ಲಿ ಈ ಇಬ್ಬರು ನಿರ್ದೇಶಕರು ಮರೆತಿದ್ದಾರೆಯೇ ಎಂದು ತಿರುಗೇಟು ನೀಡಿದರು.
ಜನಪ್ರತಿನಿಧಿಯಾಗಿದ್ದವರು ಒಬ್ಬ ಅಧಿಕಾರಿ ವಿರುದ್ಧ ಕೀಳುಮಟ್ಟದಲ್ಲಿ ಮಾತನಾಡಬಾರದಿತ್ತು. ಕ್ಷೇತ್ರ ವಿಂಗಡಣೆಯಲ್ಲಿ ವ್ಯತ್ಯಾಸವಾಗಿದ್ದರೆ ನ್ಯಾಯಾಲಯದ ಮೆಟ್ಟಿಲೇರಬಹುದು. ವ್ಯಾತ್ಯಾಸವಾಗಿದ್ದರೆ ಆಡಳಿತ ಮಂಡಳಿಯಲ್ಲಿ ನೀವು ಪಾತ್ರದಾರರಲ್ಲವೇ ಎಂದು ಪ್ರಶ್ನಿಸಿದರು.
ಆಡಳಿತ ಮಂಡಳಿ ಇದ್ದ ಸಂದರ್ಭದಲ್ಲಿ ಎಲ್ಲವೂ ನಿಮ್ಮ ಸಮ್ಮುಖದಲ್ಲಿಯೇ ತೀಮಾರ್ನ ಕೈಗೊಳ್ಳಲಾಗಿದೆ. ಕ್ಷೇತ್ರ ವಿಂಗಡಣೆ ವಿಷಯದಲ್ಲಿ 5 ವರ್ಷಗಳ ಆಡಳಿತವನ್ನು ಮರೆತು ಇಷ್ಟ ಬಂದ ರೀತಿ ಮಂಡಳಿಯ ಬಗ್ಗೆ ಆರೋಪ ಮಾಡುವುದನ್ನು ಹಾಲು ಉತ್ಪಾದಕರು ನೋಡುತ್ತಿದ್ದಾರೆ. ನಮ್ಮ ಆಡಳಿತ ಮಂಡಳಿಯ ರ್ನಿಣಯಗಳನ್ನು ರಾಜ್ಯ ಮತ್ತು ಹಾಲು ಉತ್ಪಾದಕರು ನೋಡಿದ್ದಾರೆ. ಆದರೆ ಈ ರೀತಿ ಮಾತನಾಡುವುದು ಶೋಭೆ ತರುವುದಿಲ್ಲವೆಂದು ಹರಿಹಾಯ್ದರು.
ಸ್ವಾಗತ
ಕೋಲಾರ&ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ವಿಭಜನೆ ನಂತರ ನಿರ್ದೇಶಕರ ಸ್ಥಾನ ಹೆಚ್ಚಿಸಿಕೊಳ್ಳಲು ಮತಕ್ಷೇತ್ರವನ್ನು ವಿಂಗಡಣೆ ಮಾಡಿ ಅಧಿಕಾರಿಗಳು ಹೊರಡಿಸಿದ್ದ ಪಟ್ಟಿಯನ್ನು ಮಂಗಳವಾರ ಹೈಕೋರ್ಟ್ ವಜಾಗೊಳಿಸಿದ ಆದೇಶ ಕೈಸೇರಿದ 7 ದಿನಗಳೊಳಗಾಗಿ ಒಕ್ಕೂಟ ಸಾಮಾನ್ಯ ಸಭೆ ಕರೆಯಬೇಕು ಎಂದು ಸೂಚನೆ ನೀಡಿರುವುದನ್ನು ನಂಜೇಗೌಡರು ಸ್ವಾಗತಿಸಿದರು. ಮತ ಕ್ಷೇತ್ರ ವಿಂಗಡಣೆ ಮತ್ತು ಸ್ಥಾನಗಳು ಹೆಚ್ಚಳ ಮಾಡಿರುವುದನ್ನು ಪ್ರಶ್ನಿಸಿ ಬಂಗಾರಪೇಟೆ ತಾಲೂಕಿನ ರಾಮರೆಡ್ಡಿ ಎಂಬುವವರು ಹೈಕೋರ್ಟ್ ಮೊರೆ ಹೋಗಿದ್ದರು.