ಜಿಲ್ಲೆ

ಪ್ರಾಥಮಿಕ ಶಾಲಾ ಶಿಕ್ಷಕರನ್ನು ಮರೆಯದಿರಿ

ಪ್ರಸಿನ್ ಕೆ.ಆರ್

ಆಲೂರು: ಪಾಠ ಹೇಳಿ, ಜ್ಞಾನಾರ್ಜನೆ ಮಾಡಿಸಿ ಬದುಕಿಗೆ ಬೆಳಕಾದ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಎಂದಿಗೂ ಮರೆಯಬಾರದು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ತಾಲೂಕಿನ ಕೆಂಚಮ್ಮ ಹೊಸಕೋಟೆ ರಾಯರಕೊಪ್ಪಲು ಗ್ರಾಮದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆ(ಕೆಪಿಎಸ್)ಯ 75ನೇ ವರ್ಷದ ವಜ್ರಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಗುರುಗಳ ಸೇವೆಯನ್ನು ಸ್ಮರಿಸುವುದು ಮತ್ತು ಅವರಿಗೆ ಪ್ರತ್ಯಕ್ಷವಾಗಿ ಧನ್ಯತೆ ಸಮರ್ಪಣೆ ಮಾಡುವುದು ಸಾರ್ಥಕ ಕಾರ್ಯ, ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಹಿರಿಯ ವಿದ್ಯಾರ್ಥಿಗಳು ಹಲವು ವರ್ಷದ ನಂತರ ಒಂದೆಡೆ ಸೇರಿ ತಾವು ಕಲಿತ ಶಾಲೆಯ 75ನೇ ವರ್ಷದ ವಜ್ರ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ಶಾಲೆ ಹಿರಿಯ ವಿದ್ಯಾರ್ಥಿ ಹಾಗೂ ಸುಗಮ ಸಂಗೀತ ಗಾಯಕ ಮುದ್ದುಕೃಷ್ಣ ಮಾತನಾಡಿ, ಪ್ರಾಚೀನ ಕಾಲದಿಂದಲೂ ಭಾರತ ಕಲಿಕೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಶ್ರೀಮಂತ ಸಂಪ್ರದಾಯವನ್ನು ಹೆಮ್ಮೆಪಡುತ್ತದೆ. ಯುರೋಪ್, ಮಧ್ಯಪ್ರಾಚ್ಯ ಮತ್ತು ಪೋರ್ಚುಗಲ್‌ನಂತಹ ಇತರ ರಾಷ್ಟ್ರಗಳ ಜನರು ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಭಾರತಕ್ಕೆ ಬಂದರು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಪ್ರಾಚೀನ ಕಾಲದಲ್ಲಿ ಭಾರತದಲ್ಲಿ ಆಚರಣೆಯಲ್ಲಿದ್ದ ಪ್ರಸಿದ್ಧ ಶಿಕ್ಷಣ ಪದ್ಧತಿಗಳಲ್ಲಿ ಗುರುಕುಲ ಪದ್ಧತಿಯೂ ಒಂದು. ಅಂದಿನ ಕಾಲದಲ್ಲಿ ವಿದ್ಯಾಭ್ಯಾಸಕ್ಕೆ ಬಡತನ ಎದುರಾಗಿತ್ತು. ಆದ್ದರಿಂದ ಅನಕ್ಷರಸ್ಥರೇ ಹೆಚ್ಚಾಗಿದ್ದರು. ಅಂತಹ ಕಷ್ಟದ ದಿನಗಳನ್ನು ನಾನು ಕೂಡ ಎದುರಿಸಿದ್ದೇನೆ. ಆದರೆ, ಕಲಿಕೆಯಿಂದ ಹಿಂದುಳಿಯದೆ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಾದ ಗಾಯನ ಸ್ಪರ್ಧೆಗಳಲ್ಲಿ ಭಾಗವಹಿಸಿ ಇಂದು ಈ ಎತ್ತರ ಸ್ಥಾನಕ್ಕೆ ಬಂದಿದ್ದೇನೆ ಈ ಶಾಲೆ ನನ್ನ ಸ್ಥಾನಮಾನಕ್ಕೆ ಮೆಟ್ಟಿಲಾಗಿದೆ ಎಂದು ಮೆಲುಕು ಹಾಕಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್.ಕೆ ಕುಮಾರಸ್ವಾಮಿ, ನಿವೃತ್ತ ಸಿಇಒ ಬಿ.ಎ.ಪರಮೇಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಕೆ ಎಸ್ ಮಂಜೇಗೌಡ, ಚಂದ್ರಶೇಖರ್, ಗ್ರಾಮದ ಹಿರಿಯ ವಿದ್ಯಾರ್ಥಿಗಳಾದ ಎಂ.ಬಿ.ರಾಜಣ್ಣ, ಕೆ.ಎನ್. ಕಾಂತರಾಜು, ಪೂವಯ್ಯ, ಪ್ರಾಂಶುಪಾಲರಾದ ಶೀಲಾ, ಉಪ ಪ್ರಾಂಶುಪಾಲ ಮಹದೇವ್ ಇತರರು ಇದ್ದರು.