ಶಿವಮೊಗ್ಗ:ಮುಂದಿನ ಏಪ್ರಿಲ್-ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆ, ಜೂನ್‌ನಲ್ಲಿ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆಗಳು ನಡೆಯುವ ಸಾಧ್ಯತೆ ಇದೆ. ಚುನಾವಣಾ ಸಂದರ್ಭದಲ್ಲಿ ಕಾರ್ಯಕರ್ತರು ಮೈಮರೆತರೆ ಅಧಿಕಾರವನ್ನು ಮಾತ್ರ ಕಳೆದುಕೊಳ್ಳುವುದಿಲ್ಲ, ಬದಲಾಗಿ ದೇಶದ ಅಖಂಡತೆಯನ್ನೂ ಕಳೆದುಕೊಳ್ಳುತ್ತೇವೆ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆತಂಕ ವ್ಯಕ್ತಪಡಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ನೈಋತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣೆ ಸಂಬಂಧ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾತನಾಡಿ, ಚುನಾವಣಾ ಸಂದರ್ಭದಲ್ಲಿ ಸಮರೋಪಾದಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ನಾವೇ ಅಭ್ಯರ್ಥಿಗಳೆಂದು ಭಾವಿಸಿ ಕೆಲಸ ಮಾಡಿದಾಗ ಯಾರೇ ಆದರೂ ಗೆಲ್ಲುವುದಕ್ಕೆ ಸಾಧ್ಯವಿದೆ. ಹೆಚ್ಚಿನ ಸಂಖ್ಯೆಯನ್ನು ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ದೇಶವನ್ನು ಸಂಕಷ್ಟದಿಂದ ಪಾರು ಮಾಡಬೇಕಿದೆ ಎಂದರು.
ನರೇಂದ್ರ ಮೋದಿ ಅವರು ಪ್ರಧಾನಿ ಆಗುವ ಮುಂಚೆ ಭಾರತ ಹತ್ತನೇ ಆರ್ಥಿಕ ಶಕ್ತಿಯಾಗಿತ್ತು. ಈಗ ಜಗತ್ತಿನ ಅತ್ಯಂತ ಐದನೇ ಆರ್ಥಿಕ ಶಕ್ತಿಯಾಗಿ ಬೆಳೆದಿದೆ. ಭಾರತ ತನ್ನ ಜಾಗತಿಕ ಶಕ್ತಿಯನ್ನು ಗುಲಾಮಿ ಮಾನಸಿಕತೆಯಿಂದ ಹೊರಬಂದು ತೋರಿಸಿಕೊಟ್ಟಿದೆ. ಬ್ರಿಟನ್ ಹಿಂದಿಕ್ಕಿ ನಾವು ಐದನೇ ಸ್ಥಾನಕ್ಕೆ ಬಂದಿದ್ದೇವೆ. ಭಾರತ ತನ್ನ ಜಾಗತಿಕ ಶಕ್ತಿಯನ್ನು ಗುಲಾಮಿ ಮಾನಸಿಕತೆಯಿಂದ ಹೊರಬಂದು ತೋರಿಸಿಕೊಟ್ಟಿದೆ ಎಂದು ಹೇಳಿದರು.
ಬೇಡಿ(ಕೋಳ) ಎಂದಿಗೂ ಆಭರಣ ಆಗುವುದಿಲ್ಲ. ಅಂತಹ ಮಾನಸಿಕತೆಯಲ್ಲಿ ಇರುವವವರನ್ನು ಅದರಿಂದ ಹೊರಗೆ ಬರುವಂತೆ ಮಾಡಬೇಕಿದೆ. ವ್ಯಕ್ತಿಗೆ ಆತ್ಮವಿದ್ದಂತೆ ದೇಶಕ್ಕೆ ಅಸ್ಮಿತೆ ಇರುತ್ತದೆ. ಆ ಅಸ್ಮಿತೆಯೇ ದೇಶದ ಆತ್ಮವಾಗಿದೆ. ಭಾರತದ ಹೆಸರಿನ ಬಗ್ಗೆ ಕೆಲವರು ಅನುಮಾನ ಅಪನಂಬಿಕೆ ವ್ಯಕ್ತಪಡಿಸುತ್ತಾರೆ. ಇದು ಅವರಿನ್ನೂ ಗುಲಾಮಿ ಮಾನಸಿಕತೆಯಿಂದ ಹೊರ ಬಂದಿಲ್ಲ ಎಂಬುದನ್ನು ತೋರಿಕೊಡುತ್ತದೆ. ಆ ಮಾನಸಿಕತೆಯಿಂದ ಅವರನ್ನು ಹೊರ ತರುವ ಜವಾಬ್ದಾರಿಯೂ ನಮಗೆ ಇದೆ. ಆ ಮಾನಸಿಕತೆ ಇದ್ದರೆ ಅವರಿಗೂ ಒಳ್ಳೆಯದಲ್ಲ, ದೇಶಕ್ಕೂ ಒಳ್ಳೆಯದಲ್ಲ. ಅದರಿಂದ ಹೊರ ತರುವುದಕ್ಕಾಗಿ ಎನ್‌ಎಪಿ ಜಾರಿ ಮಾಡಲಾಗಿತ್ತು. ಆದರೆ ಅದೇ ಗುಲಾಮಿ ಮಾನಸಿಕತೆ ಇರಬೇಕು ಎಂಬ ಇಚ್ಛೆ ಕೆಲವರಿಗೆ ಇದೆ ಎಂದರು.
ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಬಿ.ವೈ.ವಿಜೇಯೇಂದ್ರ, ಮಾಜಿ ಸಚಿವ ಹರತಾಳು ಹಾಲಪ್ಪ, ಎಂಎಲ್‌ಸಿಗಳಾದ ಎಸ್.ರುದ್ರೇಗೌಡ, ಡಿ.ಎಸ್.ಅರುಣ್, ಭಾರತಿ ಶೆಟ್ಟಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್, ಮುಖಂಡರಾದ ಗಿರೀಶ್ ಪಟೇಲ್, ಆರ್.ಕೆ.ಸಿದ್ರಾಮಣ್ಣ ಮತ್ತಿತರರಿದ್ದರು.