ಜಿಲ್ಲೆ

‘ಆಶ್ರಯ’ ಹಂಚಿಕೆಗೆ ಚಾಚದಿರಿ ಕೈ

ವೀರೇಶ ಸೌದ್ರಿ

ಹಳಿಯಾಳ: ಆಶ್ರಯ ವಸತಿ ಯೋಜನೆಯಡಿ ಬಡವರಿಗೆ ಮನೆಗಳನ್ನು ಮಂಜೂರು ಮಾಡಲು ಯಾವುದೇ ರೀತಿಯ ಲಂಚಕ್ಕೆ ಬೇಡಿಕೆ ಇಡಬೇಡಿ ಎಂದು ಶಾಸಕ ಆರ್.ವಿ. ದೇಶಪಾಂಡೆ ಸೂಚಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಹಳಿಯಾಳ-ದಾಂಡೇಲಿ ತಾಲೂಕಿನ ಆಶ್ರಯ ವಸತಿ ಯೋಜನೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

ಎಲ್ಲ ಬಡವರಿಗೆ ಸೂರು ದೊರೆಯಬೇಕೆಂಬ ಉದ್ದೇಶ ಸರ್ಕಾರದ್ದಾಗಿದೆ. ಹೀಗಿರುವಾಗ ಅಧಿಕಾರಿಗಳು, ಜನಪ್ರತಿನಿಧಿಗಳು ಬಡವರ ಹತ್ತಿರ ಒಂದು ರೂಪಾಯಿಯನ್ನೂ ತೆಗೆದುಕೊಳ್ಳಲು ಹೋಗಬೇಡಿ. ಆದರ ಪೂರಕವಾಗಿ ಅರ್ಹರನ್ನು ಗುರುತಿಸಿ ಅವರಿಗೆ ಮನೆಗಳನ್ನು ಮುಟ್ಟಿಸುವ ಕಾರ್ಯ ಮಾಡಿ ಎಂದರು.

ಕೆಲ ತಿಂಗಳ ಹಿಂದೆ 2000 ಮನೆಗಳನ್ನು ಮಂಜೂರು ಮಾಡಿಸಲಾಗಿತ್ತು. ಆದರೆ, ವೆಬ್‌ಸೈಟ್ ದೋಷಗಳಿಂದ ಮನೆಗಳ ಹಂಚಿಕೆ ಆಗಿರಲಿಲ್ಲ. ಅಧಿಕಾರಿಗಳು ಈ ಬಗ್ಗೆ ಮುತುವರ್ಜಿ ವಹಿಸಿ ಮನೆಗಳ ಹಂಚಿಕೆಯನ್ನು ಕೂಡಲೇ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ತಾಪಂ ಇಒ ಪರಶುರಾಮ ಘಸ್ತೆ, ದಾಂಡೇಲಿ ತಾಪಂ ಇಒ ಪ್ರಕಾಶ ಹಾಲಮ್ಮನವರ, ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಒಗಳು ಇದ್ದರು.