ಜಿಲ್ಲೆ

ರಾಜಕಾರಣ ಮಾಡಬೇಡಿ

Shivamogga - Desk - Praveena Kumar S

ಶಿಕಾರಿಪುರ: ಪಟ್ಟಣದಲ್ಲಿ ಯುವಕ ಸುಶೀಲ್ಗೆ ಚಾಕು ಇರಿದಿದ್ದು ಅಕ್ಷಮ್ಯ. ಆದರೆ ಇಂತಹ ಘಟನೆಗಳಿಗೆ ಕೋಮುಲೇಪನ ಮಾಡಿ ಚುನಾವಣೆಗೆ ಬಳಸಿಕೊಳ್ಳುವುದು ಸಮಂಜಸವಲ್ಲ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಲ್ಮಾರ್ ಮಹೇಶ್ ಸಲಹೆ ನೀಡಿದರು.
ಯಾರೇ ಆಗಲಿ ಸೂತಕದ ಮನೆಯಲ್ಲಿ, ನೊಂದವರ ಮನೆಯಲ್ಲಿ ರಾಜಕಾರಣ ಮಾಡಬಾರದು. ಇದನ್ನು ಹಿಂದೆ ಎಸ್.ಬಂಗಾರಪ್ಪ, ಬಿ.ಎಸ್.ಯಡಿಯೂರಪ್ಪ ಮಾಡಿಲ್ಲ. ಆದರೆ ಈಗ ಆ ಟ್ರೆಂಡ್ ಶುರುವಾಗಿದೆ. ಅದು ಸರಿಯಲ್ಲ. ಶಿಕಾರಿಪುರ ತಾಲೂಕು ಶರಣರ ನಾಡು. ಇಲ್ಲಿ ಎಲ್ಲರ ನಡುವೆ ಶಾಂತಿ, ಸೌಹಾರ್ದವಿದೆ. ಅದನ್ನು ನೀವು ರಾಜಕೀಯ ಲಾಭಕ್ಕಾಗಿ ಯಾರೂ ಬಳಸಿಕೊಳ್ಳಬಾರದು. ಜತೆಗೆ ಕಾಂಗ್ರೆಸ್ ಹೆಸರನ್ನೂ ಜೋಡಿಸಬಾರದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಐದೂ ಗ್ಯಾರಂಟಿಗಳು ಅತ್ಯಂತ ಯಶಸ್ವಿಯಾಗಿವೆ , ಕಾಂಗ್ರೆಸ್‌ಗೆ ಅಪಾರ ಜನಬೆಂಬಲ ವ್ಯಕ್ತವಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ. ಆದ್ದರಿಂದ ಇವರಿಗೆ ಸಹಿಸಲು ಆಗದೆ ಇಂತಹ ಗಿಮಿಕ್ ಮಾಡುತ್ತಿದ್ದಾರೆ. ಶಿಕಾರಿಪುರ ತಾಲೂಕಿನ ಜನತೆಗೆ ಇವರ ನಾಟಕಗಳು ಗೊತ್ತಿವೆ. ಅವರು ಲೋಕಸಭಾ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸಲಿದ್ದಾರೆ ಎಂದರು.
ಬಿಜೆಪಿಯವರಿಗೆ ರೈತರ ಬಗ್ಗೆ ಕಾಳಜಿಯಿಲ್ಲ. ಭೀಕರ ಬರಗಾಲ ಬಂದರೂ ಕೇಂದ್ರ ಸರ್ಕಾರ ಸಮರ್ಪಕ ಅನುದಾನ ಬಿಡುಗಡೆ ಮಾಡಿಲ್ಲ. ಸಿಎಂ, ಡಿಸಿಎಂ ನೇತೃತ್ವದಲ್ಲಿ ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಅದನ್ನು ಬಿಟ್ಟು ನೀವು ಸಿದ್ದರಾಮಯ್ಯ ಮನೆ ಮುಂದೆ ಪ್ರತಿಭಟನೆ ಮಾಡಿದರೆ ನಾವು ಇಲ್ಲಿ ನಿಮ್ಮ ಮನೆ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.