ಜೊಯಿಡಾ: ತಾಲೂಕಿನಲ್ಲಿ ಅತಿ ಹೆಚ್ಚು ಜನ ಅರಣ್ಯದ ನಡುವೆ ಜೀವನ ಸಾಗಿಸುತ್ತಿದ್ದಾರೆ. ಇಲ್ಲಿ ಅರಣ್ಯ ಇಲಾಖೆ ಹೊಸ ಅತಿಕ್ರಮಣ ಮಾಡಲು ಅವಕಾಶ ನೀಡುವುದು ಬೇಡ. ಆದರೆ, ಹಳೆಯ ಅತಿಕ್ರಮಣದಾರರಿಗೆ ಕಿರುಕುಳ ನೀಡಬಾರದು ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಎಚ್ಚರಿಸಿದರು.
ಜೊಯಿಡಾ ಕುಣಬಿ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಅವರು, ನಗರಬಾವಿಯಲ್ಲಿ ಕಾಲು ಸಂಕ ನಿರ್ಮಿಸಬೇಕು ಎಂಬ ಅಹವಾಲಿಗೆ ಸ್ಪಂದಿಸಿದರು. ಕೂಡಲೆ ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದ ಎಇಇ ಮಹಮದ್ ಇಜಾನ ಜುಬೇರ ಅವರಿಗೆ ಸೂಚಿಸಿದರು.
ಕೊಡಲಗಾಂವ ಮಾಲಂಬಾ- ರಾಮನಗರಕ್ಕೆ ಬಸ್ ಬಿಡುವ ಬಗ್ಗೆ ವಿದ್ಯಾರ್ಥಿಗಳು ಮನವಿ ಮಾಡಿಕೊಂಡಾಗ ಬೆಳಗ್ಗೆ 7 ಗಂಟೆಗೆ ಬಸ್ ಬಿಡುವಂತೆ ಸೂಚಿಸಿದರು.
ಅರಣ್ಯ ಇಲಾಖೆಯಲ್ಲಿ ವಾಚರ್ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿ ಅಕಾಲಿಕ ನಿಧನವಾಗಿದ್ದ ಕಾರಣ ಅವರ ಪತ್ನಿಗೆ ಪರಿಹಾರ ಅಥವಾ ಕೆಲಸ ಕೊಡುವಂತೆ ಅರಣ್ಯ ಇಲಾಖೆಯ ಡಿಸಿಎಫ್ ವಸಂತ ರೆಡ್ಡಿಯವರಿಗೆ ಫೋನ್ ಮೂಲಕ ಸೂಚಿಸಿದರು. ಸಭೆಗೆ ಗೈರಾದವರಿಗೆ ನೋಟಿಸ್ ಜಾರಿ ಮಾಡಬೇಕು ಎಂದು ತಹಸೀಲ್ದಾರ್ ಮಂಜುನಾಥ ಮುನ್ನೊಳಿ ಅವರಿಗೆ ಸೂಚಿಸಿದರು.
ಒಟ್ಟೂ 117 ಅರ್ಜಿಗಳು ವಿಚಾರಣೆಗೆ ಬಂದಿದ್ದು, ಆಯಾ ಇಲಾಖೆಗೆ ಮುಂದಿನ ಕ್ರಮ ಕೈಗೊಂಡು ಮಾಹಿತಿ ನೀಡುವಂತೆ ತಿಳಿಸಲಾಯಿತು.
ತಾಪಂ ಇಒ ಆನಂದ ಬಡಕುಂದ್ರಿ, ಸಿಪಿಐ ಚಂದ್ರಶೇಖರ ಹರಿಹರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿನಯ ದೇಸಾಯಿ, ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.