ಜಿಲ್ಲೆ

ತಂದೆ-ತಾಯಿಗೆ ನಿರಾಸೆ ಮಾಡಬೇಡಿ

Gadag - Desk - Tippanna Avadoot

ನರೇಗಲ್ಲ: ನಿಮ್ಮನ್ನು ಹೆತ್ತ ತಂದೆ-ತಾಯಿ ನಿಮ್ಮ ಬಗ್ಗೆ ಅಪಾರ ಕನಸು ಇಟ್ಟುಕೊಂಡಿದ್ದಾರೆ. ತಮ್ಮ ಕಷ್ಟ ಸಹಿಸಿಕೊಂಡು ನಿಮ್ಮ ವಿದ್ಯಾಭ್ಯಾಸಕ್ಕೆ ಶ್ರಮಿಸುತ್ತಿದ್ದಾರೆ. ಅವರ ಕನಸುಗಳನ್ನು ನೀವುಗಳು ಎಂದಿಗೂ ನಿರಾಸೆ ಮಾಡಬೇಡಿ ಎಂದು ರೋಣ ಪುರಸಭೆ ಮಾಜಿ ಉಪಾಧ್ಯಕ್ಷ ಮಿಥುನ ಪಾಟೀಲ ಹೇಳಿದರು.

ಪಟ್ಟಣದ ಅಭಿನವ ಅನ್ನದಾನೇಶ್ವರ ಪಿಯು ಕಾಲೇಜಿನ ವಿವಿಧ ಸಾಂಘಿಕ ಚಟುವಟಿಕೆಗಳ ಮುಕ್ತಾಯ ಹಾಗೂ ಪಿಯು ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಪಿಯು ನಂತರದ ಗುರಿಯನ್ನು ಈಗಲೇ ನಿರ್ಧರಿಸಿಕೊಳ್ಳಿ. ಮುಂಬರುವ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ, ನಿಮ್ಮ ಗುರಿ ತಲುಪಲು ನೀವು ಇಂದಿನಿಂದಲೇ ಸಿದ್ಧರಾಗಿ. ಸರಿಯಾದ ಯೋಚನೆ ಮಾಡಿ ನೀವು ಜೀವನದಲ್ಲಿ ಉತ್ತಮ ಭವಿಷ್ಯ ನಿರ್ವಿುಸಿಕೊಳ್ಳಿ ಎಂದರು.

ಸಂಸ್ಥೆಯ ಶೈಕ್ಷಣಿಕ ಸಲಹೆಗಾರ ಬಿ.ಎಸ್. ಗೌಡರ ಮಾತನಾಡಿ, ಗುರಿಯಿಲ್ಲದವ ಜೀವನದಲ್ಲಿ ಏನನ್ನೂ ಸಾಧಿಸಲಾರ. ತಂದೆ-ತಾಯಿಗಳಿಗೆ ಒಳ್ಳೆಯ ಮಕ್ಕಳಾಗಿ. ಪರಿಶ್ರಮದಿಂದ ಮುಂದೆ ಬಂದವರಿಗೆ ಜಯದ ಮಾಲೆ ದೊರಕುತ್ತದೆ. ಸಾಮಾಜಿಕ ಜಾಲತಾಣಗಳು ನಿಮ್ಮನ್ನು ಆಳುತ್ತಿರುವುದು ವಿಷಾದನೀಯ. ಎಲ್ಲವನ್ನೂ ಕೈಬಿಟ್ಟು ನಿಮ್ಮ ಅಧ್ಯಯನದ ಕಡೆಗೆ ಮಾತ್ರ ಗಮನ ಹರಿಸಿ ಎಂದರು.

ಎಸ್​ಎ ಪಿಯು ಕಾಲೇಜ್ ಪ್ರಾಚಾರ್ಯ ವೈ. ಸಿ. ಪಾಟೀಲ ಮಾತನಾಡಿ, ಪರೀಕ್ಷೆಯಲ್ಲಿ ನಕಲು ನಡೆಯುತ್ತದೆ, ನಾನು ಹೇಗಾದರೂ ಪಾಸಾಗಬಲ್ಲೆ ಎಂಬ ವಿಚಾರವನ್ನು ಮೊದಲು ತೆಗೆದು ಹಾಕಿ. ಈ ಸಲದ ಪರೀಕ್ಷೆಗೆ ವೆಬ್​ಕಾಸ್ಟಿಂಗ್ ವ್ಯವಸ್ಥೆ ಅಳವಡಿಸಿದ್ದಾರೆ, ನಿಮ್ಮ ಸ್ವಂತಿಕೆ ನಿಮ್ಮನ್ನು ಕಾಪಾಡುತ್ತದೆ. ನಿಮ್ಮ ಸ್ವಂತ ಬಲದ ಮೇಲೆ ನೀವು ಪರೀಕ್ಷೆ ಬರೆಯಲು ಸಿದ್ಧರಾಗಿ ಎಂದರು.

ಸಂಸ್ಥೆಯ ಆಡಳಿತಾಧಿಕಾರಿ ಎನ್.ಆರ್. ಗೌಡರ, ಸದಸ್ಯ ಆರ್.ಜಿ. ಪಾಟೀಲ, ವೀರಣ್ಣ ಶೆಟ್ಟರ, ರವೀಂದ್ರನಾಥ ದೊಡ್ಡಮೇಟಿ, ಉಪಸ್ಥಿತರಿದ್ದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.