ಜಿಲ್ಲೆ

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಭಯಬೇಡ

ಲಲಾಟಾಕ್ಷ ಎಸ್

ಕೊಳ್ಳೇಗಾಲ: ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಭಯಬೇಡ. ಕಲಿಕೆಯನ್ನು ಪ್ರಾಮಾಣಿಕವಾಗಿ ಮಾಡಿದರೆ ಯಶಸ್ಸು ಸಾಧ್ಯ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್ ಹೇಳಿದರು.


ಪಟ್ಟಣದ ಅಸ್ಸಿಸ್ಸಿ ಶಾಲೆಯಲ್ಲಿ ಬುಧವಾರ ಜಿಲ್ಲಾಡಳಿತ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರೇರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪರೀಕ್ಷೆಯ ಆತಂಕವನ್ನು ಬಿಡಿ. ನಿಮ್ಮೊಂದಿಗೆ ನಿಮ್ಮ ಪಾಲಕರು, ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳಿದ್ದೇವೆ. ಈಗಾಗಲೇ ಪ್ರತಿ ಶಾಲೆಯಲ್ಲೂ ಉನ್ನತ, ಅತ್ಯುನ್ನತ ಶ್ರೇಣಿ ತೆಗೆದುಕೊಳ್ಳುವ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಅವರಿಗೆ ಪ್ರೇರಣಾ ಕಾರ್ಯಕ್ರಮದಡಿ ಸಾಧನೆ ಮಾಡಲು ಪ್ರೇರಣೆ ನೀಡಲಾಗುತ್ತದೆ ಎಂದರು.


ಮಕ್ಕಳು ಆರೋಗ್ಯ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸಬೇಕು. ಮಿತ ಆಹಾರ ಸೇವನೆ, ಪೂರ್ಣ ಪ್ರಮಾಣ ನಿದ್ರೆ ಮಾಡಬೇಕು. ಪರೀಕ್ಷಾ ಭಯವನ್ನು ಬಿಡಬೇಕು. ಕಳೆದ ಬಾರಿ ಕೊಳ್ಳೇಗಾಲದ ವಿದ್ಯಾರ್ಥಿಗಳು ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದರು. ಈ ಬಾರಿಯೂ ಆ ಸ್ಥಾನವನ್ನು ಉಳಿಸಿಕೊಳ್ಳಲು ಶಿಕ್ಷಕರು ಕೆಲಸ ಮಾಡಿ ಎಂದು ಸಲಹೆ ನೀಡಿದರು.


ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಂಜುಳಾ ಮಾತನಾಡಿ, ಈ ಬಾರಿಯ ಶೈಕ್ಷಣಿಕ ಸಾಲಿನಲ್ಲಿ ಕೊಳ್ಳೇಗಾಲ ಬ್ಲಾಕ್‌ನಲ್ಲಿ ಉತ್ತಮ ಸಾಧನೆ ಮಾಡಲಿದ್ದಾರೆ. ವಿದ್ಯಾರ್ಥಿಗಳಿಂದ ಗುಣಾತ್ಮಕ ಫಲಿತಾಂಶ ಹಾಗೂ 625 ಕ್ಕೆ 625 ಅಂಕ ಪಡೆಯಲು ನಾನಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಯ ಮಕ್ಕಳು ಪಾಲ್ಗೊಂಡಿದ್ದರು. ಜಿಲ್ಲಾ ಮಟ್ಟದ ಪರೀಕ್ಷೆಯಲ್ಲಿ 600 ಕ್ಕೂ ಹೆಚ್ಚು ಅಂಕ ಪಡೆದಿದ್ದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪರೀಕ್ಷಾ ಸಲಹೆಗಳನ್ನು ನೀಡಲಾಯಿತು.


ಅಕ್ಷರ ದಾಸೋಹ ರಂಗಸ್ವಾಮಿ, ಶಿಕ್ಷಣ (ಪ್ರೌಢ) ಸಂಯೋಜಕ ಚಾಮರಾಜು, ಹಿರಿಯ ಶಿಕ್ಷಕ ನಾಗರಾಜ್ ರಾವ್ ಕಲ್ಕಟ್ಟೆ, ಮುಖ್ಯ ಶಿಕ್ಷಕರ ಸಂಘದ ಶಿವರಾಜು, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಕ್ಬರ್, ಸಿಆರ್‌ಪಿ ಚಿಕ್ಕರಾಜು, ಸಂಪನ್ಮೂಲ ಶಿಕ್ಷಕರಾದ ಮಹದೇವಮ್ಮ, ಹರೀಶ್, ಮಂಜುಳಾ, ದೊರೆಸ್ವಾಮಿ, ರಾಜಮ್ಮ ಮತ್ತಿತರಿದ್ದರು.