ವಿಜಯಪುರ : ಹೆಣ್ಣು ಸಮಾಜದ ಕಣ್ಣು . ಒಂದು ಕುಟುಂಬ ಪರಿಪೂರ್ಣತೆಯನ್ನು ಸಾಧಿಸುವುದಕ್ಕೆ ಹೆಣ್ಣು ಕಾರಣವಾಗುತ್ತಾಳೆ. ಹೀಗಾಗಿ ಹೆಣ್ಣುಮಗು ಜನಿಸಿತೆಂದು ಕಣ್ಣೀರು ಹಾಕುವ ಬದಲು ಮನೆಗೆ ಹೊಸ ಬೆಳಕು ಸಿಕ್ಕಿತೆಂದು ಸಂತೋಷ ಪಡಬೇಕು ಎಂದು ಖ್ಯಾತ ಪ್ರಸೂತಿ ತಜ್ಞೆ ಡಾ.ಗೀತಾಂಜಲಿ ಪಾಟೀಲ ಹೇಳಿದರು.
ನಗರದ ಶ್ರೀ ಸಿದ್ಧೇಶ್ವರ ಲೋಕ ಕಲ್ಯಾಣ ಚಾರಿಟೇಬಲ್ ಟ್ರಸ್ಟ್‌ನ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬುಧವಾರ ನಡೆದ ಅಂತಾರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಹೆಣ್ಣು ಗಂಡು ಎನ್ನುವ ವ್ಯತ್ಯಾಸವಿಲ್ಲದಂತೆ ಪ್ರತಿಯೊಂದು ರಂಗದಲ್ಲಿಯೂ ಕೂಡ ಪುರುಷನ ಸರಿಸಮಾನವಾಗಿ ಹೆಗಲಿಗೆ ಹೆಗಲು ನೀಡಿ ದುಡಿಯುವಲ್ಲಿ ಹೆಣ್ಣುಮಕ್ಕಳು ಸಹ ದಿಟ್ಟ ಹೆಜ್ಜೆ ಇಟ್ಟಿರುವುದು ಹೆಮ್ಮೆಯ ಸಂಗತಿ. ಯಾವಾಗ ಲಿಂಗ ತಾರತಮ್ಯತೆ ನಿರ್ಮೂಲನೆಯಾಗುತ್ತದೆಯೋ ಆವಾಗಲೇ ಪ್ರಜಾಪ್ರಭುತ್ವಕ್ಕೆ ನಿಜವಾದ ಅರ್ಥ ಬರುತ್ತದೆ. ಇದನ್ನು ಸಾಕಾರ ಮಾಡುವ ಗಟ್ಟಿ ನಿರ್ಧಾರದಿಂದ ಹೆಣ್ಣುಮಕ್ಕಳು ಮುನ್ನುಗ್ಗಬೇಕಿರುವುದು ಅನಿವಾರ್ಯವಾಗಿದೆ ಎಂದರು.
ಎಲ್ಲಿ ಹೆಣ್ಣನ್ನು ಪೂಜ್ಯಭಾವನೆಯಿಂದ ಕಾಣಲಾಗುತ್ತದೆಯೋ ಅಲ್ಲಿ ದೇವತೆಗಳು ವಾಸವಾಗಿರುತ್ತಾರೆ. ಆದರೆ ಆಧುನಿಕತೆ ಎಡೆಗೆ ಮುಖ ಮಾಡಿದಂತೆ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಹುಟ್ಟುವುದೇ ಅಪರಾಧ ಎನ್ನುವಂತ ಋಣಾತ್ಮಕ ವಿಚಾರ ಜನ ಸಾಮಾನ್ಯರ ತಲೆ ಹೊಕ್ಕಿದೆ. ಪರಿಣಾಮವಾಗಿ ಲಿಂಗ ತಾರತಮ್ಯತೆ ಇಂದು ತಾಂಡವವಾಡುತ್ತಿದೆ. ಇದನ್ನು ಹೋಗಲಾಡಿಸುವ ದೃಷ್ಠಿಯಲ್ಲಿ ನಾವೆಲ್ಲ ಕಾರ್ಯ ಪ್ರವೃತ್ತರಾಗಬೇಕು ಮತ್ತು ಹೆಣ್ಣು ಗಂಡುಗಳು ಸರಿಸಮಾನ ಎನ್ನುವುದನ್ನು ಅರ್ಥೈಸಬೇಕು ಎಂದು ಹೇಳಿದರು.
ಆಸ್ಪತ್ರೆಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆ ಲೀಲಾವತಿ ಸಿ.ಎ ಮಾತನಾಡಿ, ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದು ದೇಶದಲ್ಲೇ ಆಂದೋಲನ ಸೃಷ್ಠಿಸಿದೆ. ಲಿಂಗ ತಾರತಮ್ಯವನ್ನು ಹೋಗಲಾಡಿಸುವುದು ಮತ್ತು ಭ್ರೂಣ ಹತ್ಯೆಯನ್ನು ತಡೆಯುವುದಕ್ಕಾಗಿ ಸರ್ಕಾರ ಇಟ್ಟಂತ ಅತ್ಯಂತ ಮಹತ್ತರವಾದ ಹೆಜ್ಜೆ ಇದಾಗಿದ್ದು ನಾವೆಲ್ಲರೂ ಆ ಹೆಜ್ಜೆಯ ಜೊತೆಗೆ ಹೆಜ್ಜೆ ಹಾಕುತ್ತ ಸಾಗಬೇಕಿದೆ ಎಂದರು.
ಆಸ್ಪತ್ರೆಯ ಸಿಎಒ ಶರಣ ಮಳಖೇಡ್ಕರ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.