ವಿಜಯಪುರ: ಚಿರನಿದ್ರೆಗೆ ಜಾರುವ ಆಡಳಿತ ವರ್ಗವನ್ನು ಬಡಿದೆಬ್ಬಿಸಲು ಸಾವುಗಳೇ ಸಂಭವಿಸಬೇಕು !
ಹೌದು, ಅಚ್ಚರಿ ಎನ್ನಿಸಿದರೂ ಇದು ಸತ್ಯ. ಆಗಾಗ ಸಂಭವಿಸುತ್ತಿರುವ ಮುಗ್ದ ಕಂದಮ್ಮಗಳ ಸಾವು ಪಾಲಿಕೆಯ ಆಡಳಿತ ಅವ್ಯವಸ್ಥೆಗೆ ಕೈಗನ್ನಡಿಯಾಗಿವೆ. ಈ ಹಿಂದೆ ಇಂಡಿ ರಸ್ತೆಯಲ್ಲಿರುವ ನೀರು ಶುದ್ಧೀಕರಣ ಘಟಕದಲ್ಲಿ ಬಿದ್ದು ಮಕ್ಕಳು ಸಾವಿಗೀಡಾಗಿದ್ದರು. ಆದರೂ, ಈ ಸಾವು-ನೋವುಗಳಿಗೆ ‘ಡೋಂಟ್ ಕೇರ್’ ಎಂಬ ಅಧಿಕಾರಿಗಳ ಧೋರಣೆಗೆ ಸಾವಿಗೀಡಾದ ಮತ್ತೊಂದು ಮಗು ಹಾಗೂ ಕಾಟಾಚಾರಕ್ಕೆ ಕೈಗೊಂಡ ಚರಂಡಿ ಮುಚ್ಚುವ ಕಾಮಗಾರಿ ಮತ್ತೊಂದು ಉದಾಹರಣೆಯಾಗಿದೆ.
ಇಲ್ಲಿನ ವಾರ್ಡ್ ನಂ. 24ರ ಜಾಮಿಯಾ ಮಸೀದಿ ಹಿಂದೆ ಬರುವ ಕುಂಬಾರ ಓಣಿಯಲ್ಲಿ ಅ.15 ರಂದು ಮಗು ಬಿದ್ದು ಧಾರುಣವಾಗಿ ಸಾವಿಗೀಡಾಗಿತ್ತು. ಯಾಸೀನ ಮುಲ್ಲಾ ಎಂಬ ಒಂದೂವರೆ ವರ್ಷದ ಮಗು ತೆರೆದ ಚರಂಡಿಯಲ್ಲಿ ಬಿದ್ದು ಮೃತಪಟ್ಟ ಘಟನೆ ಇಡೀ ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿತ್ತು. ಆಗ ಸ್ಥಳಕ್ಕೆ ದೌಢಾಯಿಸಿ ಸಾಂತ್ವನ ಹೇಳಿ, ತ್ವರಿತವಾಗಿ ಕಾಮಗಾರಿ ಕೈಗೊಳ್ಳುವುದಾಗಿಯೂ ಇನ್ನೊಮ್ಮೆ ಇಂಥ ಘಟನೆ ಮರುಕಳಿಸದಂತೆಯೂ ಭರವಸೆ ನೀಡಿದ ಅಧಿಕಾರಿ ವರ್ಗ ಮಾಡಿದ್ದೇನು ಗೊತ್ತಾ ?
ಇಡೀ ಚರಂಡಿ ಸ್ವಚ್ಛಗೊಳಿಸಿ ಕಾಂಕ್ರೀಟ್ ಹಾಕುವುದಾಗಿ ಹೇಳಿದ್ದ ಅಧಿಕಾರಿ ಇದೀಗ ಅರ್ಧಂಬರ್ಧ ಕಾಮಗಾರಿ ಮಾಡಿ ಕೈತೊಳೆದುಕೊಂಡಿದೆ. ಕಾಂಕ್ರೀಟ್ ದಪ್ಪ ಪರಸಿ ಬಳಸಿ ಚರಂಡಿಗೆ ಮೇಲು ಹೊದಿಕೆ ಹಾಕುವುದಾಗಿ ಹೇಳಿದ್ದ ಅಧಿಕಾರಿಗಳು ಇದೀಗ ಸಣ್ಣ ಪರಸಿಗಲ್ಲು ಹಾಕಿ ಹೋಗಿದ್ದಾರೆ. ಅದು ಸಹ ಯಾವಾಗ ಬೇಕಾದರೂ ಬೀಳುವಂತಿದೆ. ಇಂದಿಲ್ಲ ನಾಳೆ ಅದು ಸಹ ಒಡೆದು ಸಾವು ಸಂಭವಿಸಿದರೂ ಅಚ್ಚರಿಯಿಲ್ಲ ಎನ್ನುತ್ತಿದ್ದಾರೆ ಸ್ಥಳೀಯ ನಿವಾಸಿಗಳು.
ವಾರ್ಡ್‌ನಲ್ಲಿ ಒಳಚರಂಡಿ ವ್ಯವಸ್ಥೆಯೇ ಸರಿಯಿಲ್ಲ. ಮಳೆ ಬಂದರೆ ಬಡಾವರಣೆ ಚರಂಡಿ ನೀರಿನಿಂದ ಆವೃತಗೊಳ್ಳುತ್ತದೆ. ಸಾವು ಸಂಭವಿಸಿದರೂ ಬಹುತೇಕ ಕಡೆ ಗಟಾರ್‌ಗೆ ಮೇಲು ಹೊದಿಕೆ ಹಾಕಿಲ್ಲ. ಸಿಸಿ ರಸ್ತೆ ಮಾಡುವುದಾಗಿ ಹೇಳುತ್ತಲೇ ಚರಂಡಿ ಕಾಮಗಾರಿ ಅಪೂರ್ಣಗೊಳಿಸುತ್ತಿದ್ದಾರೆ. ಒಬ್ಬೊಬ್ಬ ಅಧಿಕಾರಿಯೂ ಒಂದೊಂದು ನೆಪ ಹೇಳುತ್ತಾರೆಂದು ಜನ ಆಕ್ರೋಶ ಹೊರಹಾಕುತ್ತಿದ್ದಾರೆ. ಬಡಾವಣೆಯಲ್ಲಿ ಇಕ್ರಾ ಎಂಬ ಶಾಲೆ ಇದ್ದು ನೂರಾರು ಮಕ್ಕಳು ಕಲಿಯುತ್ತಾರೆ. ಮತ್ತೊಂದು ಅವಘಡಕ್ಕೂ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕೆಂಬುದು ಸ್ಥಳೀಯರ ಆಶಯ.