ಮದ್ದೂರು: ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ಹಲವಾರು ವಿದ್ಯಾರ್ಥಿಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಮಹಾನ್ ವ್ಯಕ್ತಿಗಳಾಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಶಾಸಕ ಕೆ.ಎಂ.ಉದಯ್ ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕಿನ ಕದಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ ಶಾಲಾ ಪ್ರಾರಂಭೋತ್ಸವ, ಉಚಿತ ಪಠ್ಯ ಪುಸ್ತಕ ಮತ್ತು ಸಮವಸ್ತ್ರ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯ ಹಾಗೂ ದೇಶವನ್ನು ಆಳುತ್ತಿರುವವರು, ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಡುತ್ತಿರುವವರು ಕೂಡ ಸರ್ಕಾರಿ ಶಾಲೆಯಲ್ಲಿ ಓದಿದವರು. ಅದ್ದರಿಂದ ಯಾರಿಗೂ ಸರ್ಕಾರಿ ಶಾಲೆಯ ಎಂಬ ಕೀಳರಿಮೆ ಬೇಡ. ನಾನು ಕೂಡ ಕದಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲೇ ವ್ಯಾಸಂಗ ಮಾಡಿದ್ದು ಎಂದು ತಾವು ಓದುತ್ತಿದ್ದ ದಿನಗಳನ್ನು ನೆನೆದರು.
ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನ ಬಿಸಿಯೂಟ, ಪಠ್ಯ ಪುಸ್ತಕ, ಸಮವಸ್ತ್ರ ಸೇರಿದಂತೆ ಎಲ್ಲ ರೀತಿಯ ಸವಲತ್ತುಗಳು ಸಿಗುತ್ತಿದ್ದು, ಪಾಲಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವ ಮೂಲಕ ಸರ್ಕಾರಿ ಶಾಲೆಗಳ ಉಳಿವಿಗೆ ಮುಂದಾಗಬೇಕು ಎಂದು ತಿಳಿಸಿದರು.
ಬಹಳ ವರ್ಷಗಳ ಹಿಂದೆ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಇಷ್ಟೊಂದು ಸೌಲಭ್ಯಗಳು ಇರಲಿಲ್ಲ. ಅದರೆ, ಇಂದು ಸರ್ಕಾರ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡುತ್ತಿರುವುದು ವಿದ್ಯಾರ್ಥಿಗಳು ಇದರ ಸದ್ಬಳಕೆ ಮಾಡಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ತಾಲೂಕಿನಲ್ಲಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಅನುಕೂಲವಾಗಲಿ ಎಂಬ ಉದ್ದೇಶದಿಂದ ವಿವೇಕ್ ಯೋಜನೆಯಡಿ 35 ಹೆಚ್ಚುವರಿ ಹೊಸ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ. ಶಿಥಿಲಗೊಂಡ ಕೊಠಡಿಗಳ ರಿಪೇರಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಶಿಕ್ಷಕರ ಕೊರತೆ ಆಗಬಾರದು ಎಂಬ ಉದ್ದೇಶದಿಂದ ಸರ್ಕಾರಕ್ಕೆ ಒತ್ತಡ ತಂದು ಪ್ರಾಥಮಿಕ ಪಾಠಶಾಲೆಗೆ 126 ಹಾಗೂ ಪ್ರೌಢಶಾಲೆ 85 ಅತಿಥಿ ಶಿಕ್ಷಕರನ್ನು ನೇವಿಸುವ ಮೂಲಕ ಸರ್ಕಾರಿ ಶಾಲೆಗಳಿಗೆ ಯಾವುದೆ ರೀತಿಯ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಬಾಕ್ಸ್ ಐಟಂ: ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ತಾಲೂಕಿನ ಎಲ್ಲ ಸರ್ಕಾರಿ ಶಾಲೆಗಳು ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತವಾಗಿ ಬ್ಯಾಗ್, ನೋಟ್ ಬುಕ್, ಜಾಮಿಟ್ರಿ ಬಾಕ್ಸ್‌ಗಳನ್ನು ಜೂನ್ 10 ರಂದು ಏಕಕಾಲಕ್ಕೆ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ಸರ್ಕಾರದ ವತಿಯಿಂದ ಸರ್ಕಾರಿ ಶಾಲೆಗಳಲ್ಲಿ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ಇರುವ ಪೋಸ್ಟರ್ ಅನ್ನು ಶಾಸಕ ಕೆ.ಎಂ.ಉದಯ್ ಬಿಡುಗಡೆಗೊಳಿಸಿದರು.
ಮನ್‌ಮುಲ್ ಮಾಜಿ ಅಧ್ಯಕ್ಷ ರಾಮಕೃಷ್ಣ, ಬಿಇಒ ಧನಂಜಯ, ಗ್ರಾಪಂ ಅಧ್ಯಕ್ಷ ತಿಮ್ಮೇಗೌಡ, ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿಗಳಾದ ಪರಮಶಿವಯ್ಯ, ಮಹದೇವು, ಪುಟ್ಟಸ್ವಾಮಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ರವೀಶ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ರಾಜೇಶ್ವರಿ, ಕ್ಷೇತ್ರ ಸಮನ್ವಯಾಧಿಕಾರಿ ಮಹದೇವ ಪ್ರಸಾದ್, ಎಸ್‌ಡಿಎಂಸಿ ಅಧ್ಯಕ್ಷ ಮಹೇಶ್, ಮುಖ್ಯ ಶಿಕ್ಷಕರಾದ ಜೋಗಿಗೌಡ, ನಾಗರತ್ನ ಇದ್ದರು.