ಜಿಲ್ಲೆ

ಪಡಿತರ ಚೀಟಿ ರದ್ದತಿ ವದಂತಿ ನಂಬದಿರಿ


ಲಕ್ಷ್ಮೇಶ್ವರ: ತಾಲೂಕಿನಲ್ಲಿ ಈ ತಿಂಗಳವರೆಗಿನ ಕೇವಲ 54 ಪಡಿತರ ಚೀಟಿ ಮಾತ್ರ ರದ್ದಾಗಿವೆ. ಸರ್ಕಾರಿ ನೌಕರಿ ಹೊಂದಿದ ಮತ್ತು ಆದಾಯ ತೆರಿಗೆ ಪಾವತಿದಾರರ ಬಿಪಿಎಲ್ ಕಾರ್ಡ್​ಗಳನ್ನು ಎಪಿಎಲ್ ಕಾರ್ಡ್​ಗಳಾಗಿ ಬದಲಾಯಿಸಲಾಗಿದೆ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ನಾಗರಾಜ ಮಡಿವಾಳರ ತಿಳಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕು ವ್ಯಾಪ್ತಿಯಲ್ಲಿ ಬಹಳಷ್ಟು ಪಡಿತರ ಚೀಟಿಗಳು ರದ್ದಾಗಿವೆ ಎನ್ನುವ ವದಂತಿ ನಂಬದಿರಿ. ಇಲಾಖೆ ಮಾಹಿತಿ ಪ್ರಕಾರ ಕೇವಲ 54 ಕಾರ್ಡ್​ಗಳು ಮಾತ್ರ ರದ್ದಾಗಿವೆ ಎಂದು ಸ್ಪಷ್ಟಪಡಿಸಿದರು.

ತಾಲೂಕಿನಲ್ಲಿ ಒಟ್ಟು 30311 ವಿವಿಧ ಕಾರ್ಡ್​ಗಳಿದ್ದು, ಅದರಲ್ಲಿ ಅಂತ್ಯೋದಯ 3311, ಬಿಪಿಎಲ್ 23239 ಹಾಗೂ ಎಪಿಎಲ್ 3761 ಕಾರ್ಡ್​ಗಲಿವೆ. ಇದರಲ್ಲಿ ಸರ್ಕಾರಿ ನೌಕರಿ ಹೊಂದಿರುವ ಹಾಗೂ ಆದಾಯ ತೆರಿಗೆ ಪಾವತಿ ಮಾಡುವವರ ಕಾರ್ಡ್ ಎಪಿಎಲ್​ಗೆ ಪರಿವರ್ತಿಸಲಾಗಿದೆ. ಇದರಲ್ಲಿ ವಿನಾಕಾರಣ ರಾಜಕಾರಣ, ಆರೋಪ ಮಾಡಲಾಗುತ್ತಿದೆ ಎಂದರು.

ತಾಲೂಕಿನಲ್ಲಿ ವಲಸೆ ಹೋಗಿರುವ ತಾಂಡಾ ಮತ್ತು ಗ್ರಾಮೀಣ ಭಾಗದ ಜನರ ಬಿಪಿಎಲ್ ಕಾರ್ಡ್​ಗಳು ರದ್ದಾಗಿದ್ದರೂ, ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಹೊಸ ಕಾರ್ಡ್ ದೊರಕಿಸಲಾಗುವುದು. ಜನರಿಗೆ ಪಡಿತರ ಚೀಟಿ ಬಗ್ಗೆ ಸಮಸ್ಯೆಗಳಿದ್ದಲ್ಲಿ ತಾಪಂ ಕಾರ್ಯಾಲಯ ಹಾಗೂ ತಹಸೀಲ್ದಾರ್ ಕಚೇರಿಗೆ ಬಂದು ಅರ್ಜಿ ಸಲ್ಲಿಸಿ, ಸರಿಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಹೊಸ ಕಾರ್ಡ್ ಮಾಡಿಸಲು ಸರ್ಕಾರ ಇಷ್ಟರಲ್ಲಿಯೇ ಲಾಗಿನ್ ಓಪನ್ ಮಾಡಿ ಅವಕಾಶ ನೀಡಲಿದೆ. ವೈಬ್​ಸೈಟ್ ಪ್ರಾರಂಭವಾದ ಕೂಡಲೆ ಹೊಸ ಕಾರ್ಡ್, ತಿದ್ದುಪಡಿ ಮಾಡಿಸುವವರಿಗೆ 15 ದಿನಗಳ ಕಾಲಾವಕಾಶ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಬಡವರ ಪರವಾಗಿದೆ. ಅವರ ಕಣ್ಣೀರು ಒರೆಸುವ ಕಾರ್ಯ ಮಾಡುತ್ತಿದೆ. ಪಡಿತರ ಚೀಟಿ ರದ್ದಾಗುವ ಬಗ್ಗೆ ಯಾರು ಭಯಪಡಬೇಕಾದ ಅಗತ್ಯವಿಲ್ಲ. ಕೆಲವು ತಾಂತ್ರಿಕ ಸಮಸ್ಯೆಗಳಿಂದ ಯಾರದೇ ಆದರೂ ಬಡವರ ಕಾರ್ಡ್ ರದ್ದಾಗಿದ್ದರೆ, ಅಧಿಕಾರಿಗಳನ್ನು ಸಂರ್ಪಸಿ ಸರಿಪಡಿಸಿಕೊಳ್ಳಬಹುದು ಎಂದರು.

ಸುದ್ದಿಗೋಷ್ಠಿಯಲ್ಲಿ ಕಲ್ಲಪ್ಪ ಗಂಗಣ್ಣವರ, ಕಾರ್ತಿಕ ದೊಡ್ಡಮನಿ, ಹಸನ್​ಸಾಬ್ ಜಂಗ್ಲಿ, ಶಶಿಕಲಾ ಬಡಿಗೇರ ಇದ್ದರು.