ಹುಬ್ಬಳ್ಳಿ: ಸಿಇಎನ್ ಸೈಬರ್ ಪೊಲೀಸ್ ಠಾಣೆ ನೇತೃತ್ವದಲ್ಲಿ ನಗರದ ರೈಲ್ವೆ ನಿಲ್ದಾಣ ಹಾಗೂ ತೋಳನಕೆರೆ ಉದ್ಯಾನದಲ್ಲಿ ಸೈಬರ್ ಅಪರಾಧ ತಡೆ ಹಾಗೂ ಡ್ರಗ್ಸ್ ನಿಯಂತ್ರಣಕ್ಕಾಗಿ ಶುಕ್ರವಾರ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.
ಸೈಬರ್ ಠಾಣೆ ಇನ್ಸ್‌ಪೆಕ್ಟರ್ ಬಿ.ಕೆ. ಪಾಟೀಲ ಮಾತನಾಡಿ, ವಂಚಕರ ಮಾತಿಗೆ ಮರುಳಾಗಿ ಬ್ಯಾಂಕ್ ಡೀಟೇಲ್ಸ್, ಒಟಿಪಿ ಸಂಖ್ಯೆ ಕೊಡಬೇಡಿ. ಒಂದು ವೇಳೆ ವಂಚಕರು ಕರೆ ಮಾಡಿದರೆ ನೇರವಾಗಿ 1903 ಸಂಖ್ಯೆಗೆ ಕರೆ ಮಾಡಬೇಕು. ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಬೇರೆಯವರ ಖಾತೆಗೆ ಹೋಗುವುದನ್ನು ತಡೆಯುತ್ತದೆ. ಗಾಂಜಾ, ಡ್ರಗ್ಸ್ ಅನ್ನು ಯಾರೂ ಸೇವಿಸಬಾರದು. ಒಂದು ವೇಳೆ ಇದರ ದಾಸರಾದರೆ ಮನೋದೈಹಿಕ ಸಾಮರ್ಥ್ಯ ಕುಸಿಯಲಿದೆ. ಆರೋಗ್ಯವೇ ಕೈ ಕೊಟ್ಟರೆ ಯಾವ ಸಂಪತ್ತು ನಿಮ್ಮ ಬಳಿ ಇಲ್ಲವಾಗಲಿದೆ ಎಂದರು. ಉತ್ತರ ಸಂಚಾರ ವಿಭಾಗದ ಎಸಿಪಿ ವಿನೋದ ಮುಕ್ತೇದಾರ, ಆಟೋ ರಿಕ್ಷಾ ಚಾಲಕರ ಮತ್ತು ಮಾಲೀಕ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಇತರರು ಇದ್ದರು.