ಮದ್ದೂರು ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಮುಟ್ಟಿನ ಕಪ್ ಬಳಕೆ ಕುರಿತ ತರಬೇತುದಾರರ ತರಬೇತಿಯನ್ನು ರಾಮಲಿಂಗಯ್ಯ ಉದ್ಘಾಟಿಸಿದರು. ಡಾ.ಆಶಾಲತಾ, ಡಾ.ಶೀಲಾ, ಸುರೇಶ್, ಡಾ.ರವಿಶಂಕರ್ ಇದ್ದರು.  
ಜಿಲ್ಲೆ

ಮುಟ್ಟಿನ ಕಪ್ ಬಳಸಲು ಮುಜುಗರ ಬೇಡ

ಶಿವಶಂಕರ್ ಎಂ. ಹೆಬ್ಬಳ್ಳ

ಮದ್ದೂರು : ಮುಟ್ಟಿನ ಕಪ್ ಬಳಸಲು ಮಹಿಳೆಯರು ಮುಜುಗರ ಪಡಬಾರದೆಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಮಲಿಂಗಯ್ಯ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ತಾಲೂಕು ಪಂಚಾಯತಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಮುಟ್ಟಿನ ಕಪ್ ಬಳಕೆ ಕುರಿತ ತರಬೇತುದಾರರ ತರಬೇತಿ ಉದ್ಘಾಟಿಸಿ ಮಾತನಾಡಿದರು.

ಸಮಾಜ ಮುಂದುವರಿದಂತೆ ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಬದಲಾವಣೆಗಳು ಬರುತ್ತಿವೆ. ಈ ಹಿಂದೆ ಮುಟ್ಟಿನ ಸಂದರ್ಭದಲ್ಲಿ ಪ್ಯಾಡ್‌ಗಳನ್ನು ಉಪಯೋಗಿಸಲಾಗುತ್ತಿತ್ತು. ಇದರಿಂದ ಹಣ, ಸಮಯ ಎರಡೂ ವ್ಯರ್ಥವಾಗುತ್ತಿತ್ತು. ಮಹಿಳೆಯರಿಗೆ ಮುಟ್ಟಿನ ಸಂದರ್ಭದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯದ ಕೊರತೆಯೂ ಕಾಡುತ್ತಿತ್ತು. ಈ ದಿಸೆಯಲ್ಲಿ ಮುಟ್ಟಿನ ವಿಷಯದಲ್ಲಿ ಕ್ರಾಂತಿಕಾರಿ ಬದಲಾವಣೆಗಳು ಆಗುತ್ತಿವೆ ಎಂದರು.

ಸಮಾಜದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಮಹಿಳೆಯರು ಮೊದಲು ಮುಟ್ಟಿನ ಕಪ್ ಬಳಸಿ ಇತರ ಮಹಿಳೆಯರಿಗೆ ಮಾದರಿ ಆಗಬೇಕು ಎಂದರು.

ಈಗಾಗಲೇ ಮದ್ದೂರು ತಾಲೂಕು ಪಂಚಾಯಿತಿಯಿಂದ 15 ಕ್ಕೂ ಹೆಚ್ಚು ಗ್ರಾಮಪಂಚಾಯಿತಿಗಳಲ್ಲಿ ಮುಟ್ಟಿನ ಕಪ್ ವಿತರಣೆ ಮಾಡಿದ್ದೇವೆ. ಸಾಮಾಜಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಪ್ರಾಥಮಿಕ ಪ್ರೌಢಶಾಲಾ ಶಿಕ್ಷಕಿಯರು, ಪದವಿ ಕಾಲೇಜಿನ ವಿದ್ಯಾರ್ಥಿಗಳು, ವಿವಿಧ ಇಲಾಖೆಗಳ ಮಹಿಳಾ ಸಿಬ್ಬಂದಿ, ಸಂಜೀವಿನಿ ಕಾರ್ಯಕರ್ತೆಯರು ಸೇರಿದಂತೆ ವಿವಿಧ 4 ಸಾವಿರಕ್ಕೂ ಅಧಿಕ ಮುಂಚೂಣಿ ಕಾರ್ಯಕರ್ತೆಯರಿಗೆ ಮೊದಲ ಹಂತದಲ್ಲಿ ಉಚಿತವಾಗಿ ಮುಟ್ಟಿನ ಕಪ್ ವಿತರಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದಕ್ಕೆ ವಿವಿಧ ಕಂಪನಿಗಳ ಸಿಎಸ್‌ಆರ್ ಅನುದಾನ ಬಳಸಿಕೊಳ್ಳಲಾಗುತ್ತಿದೆ ಎಂದರು.

ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಆಶಾಲತಾ ಮಾತನಾಡಿ, ಮುಟ್ಟಿನ ಕಪ್ ಬಳಸುವ ಸಂದರ್ಭ ಅದರ ಕುರಿತು ಅರಿವು ಪಡೆದುಕೊಳ್ಳುವುದು ಬಹಳ ಮುಖ್ಯ. ಮಹಿಳೆಯರು ಇದರ ಕುರಿತು ಯಾವುದೇ ಪೂರ್ವಾಗ್ರಹ ಪೀಡಿತರಾಗದೆ ನಿಸ್ಸಂಕೋಚವಾಗಿ ಬಳಸಲು ಮುಂದಡಿ ಇಡಬೇಕು ಎಂದರು.

ತಾಲೂಕು ಸಾರ್ವಜನಿಕ ಆಸ್ಪತ್ರೆಯ ಗರ್ಭಿಣಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಶೀಲಾ ಅವರು ಮುಟ್ಟಿನ ಕಪ್ ಬಳಕೆ ಕುರಿತು ತರಬೇತಿ ನೀಡಿದರು. ತಾಲೂಕು ಯೋಜನಾಧಿಕಾರಿ ಸುರೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ರವಿಶಂಕರ್, ಆರೋಗ್ಯ ಇಲಾಖೆ ಸಿಬ್ಬಂದಿ ಮರಿಸ್ವಾಮಿ, ತಮ್ಮೇಗೌಡ, ಮಣಿ, ಶೀಲಾ ಪಾಲ್ಗೊಂಡಿದ್ದರು.

ವಿತರಣೆಗೆ ಸಿದ್ಧತೆ

ಮೊದಲ ಹಂತದಲ್ಲಿ 4 ಸಾವಿರಕ್ಕೂ ಅಧಿಕ ಮಹಿಳೆಯರಿಗೆ ಉಚಿತ ಮುಟ್ಟಿನ ಕಪ್ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಶಿಕ್ಷಕಿಯರು, ಉಪನ್ಯಾಸಕಿಯರು, ಪದವಿ ಕಾಲೇಜು ವಿದ್ಯಾರ್ಥಿನಿಯರು, ವಿವಿಧ ಇಲಾಖೆಗಳ ಮಹಿಳಾ ಸಿಬ್ಬಂದಿ, ಸಂಜೀವಿನಿ ಕಾರ್ಯಕರ್ತೆಯರು, ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ವಿತರಣೆ ಕಾರ್ಯಕ್ರಮ ನಿರ್ವಹಣೆಗೆ ತಾಪಂ ಇಒ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚನೆ ಮಾಡಲಾಗಿದೆ.