ಬನಹಟ್ಟಿ ವಿಶ್ವ ಕರ್ಮ ದೇವಸ್ಥಾನದ ಜಾತ್ರಾ ಮಹೋತ್ಸವ, ನೂತನ ಗೋಪುರ ಹಾಗೂ ಕಲಶಾರೋಹಣ ಸಮಾರಂಭಕ್ಕೆ ಅರಕಲಗೂಡು ತಾಲೂಕಿನ ಅರೇಮಾದನಹಳ್ಳಿಯ ವಿಶ್ವ ಕರ್ಮ ಪೀಠದ ಜಗದ್ಗುರು ಅನಂತ ಶ್ರೀ ವಿಭೂಷಿತ ಶಿವ ಸುಜ್ಞಾನ ತೀರ್ಥ ಮಹಾಸ್ವಾಮಿಗಳು ಚಾಲನೆ ನೀಡಿದರು. ಗುರುಸಿದ್ಧೇಶ್ವರ ಶ್ರೀಗಳು, ಶರಣಬಸವ ಶಿವಾಚಾರ್ಯರು, ಅನ್ನದಾನೇಶ್ವರ ಶ್ರೀಗಳು ಇದ್ದರು. 
ಜಿಲ್ಲೆ

ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗದಿರಿ

ರಬಕವಿ/ಬನಹಟ್ಟಿ: ವಿಶ್ವಕ್ಕೆ ಮಾದರಿಯಾದ ವಿಶ್ವಕರ್ಮರ ಆದರ್ಶಗಳನ್ನು ಬದುಕಿನುದ್ದಕ್ಕೂ ಅಳವಡಿಸಿಕೊಂಡರೆ ಬದುಕು ಬಂಗಾರವಾಗುತ್ತದೆ ಎಂದು ಅರಕಲಗೂಡು ತಾಲೂಕಿನ ಅರೇಮಾದನಹಳ್ಳಿಯ ವಿಶ್ವಕರ್ಮ ಪೀಠದ ಜಗದ್ಗುರು ಅನಂತ ಶ್ರೀ ವಿಭೂಷಿತ ಶಿವಸುಜ್ಞಾನ ತೀರ್ಥ ಮಹಾಸ್ವಾಮಿಗಳು ಹೇಳಿದರು.

ಬನಹಟ್ಟಿ ವಿಶ್ವಕರ್ಮ ದೇವಸ್ಥಾನದ ಜಾತ್ರಾ ಮಹೋತ್ಸವ, ನೂತನ ಗೋಪುರ ಹಾಗೂ ಕಲಶಾರೋಹಣ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಂಘಟಿತರಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಮುಖಂಡರು, ಯುವಕರಿಗೆ ಮಾರ್ಗದರ್ಶನ ನೀಡಬೇಕು. ಕಾಯಕ ನಿಷ್ಠರಾಗಿರಿ, ಪರೋಪಕಾರ, ದಾನ ಧರ್ಮಗಳಲ್ಲಿ ಪಾಲುದಾರರಾಗಿ ಬದುಕಬೇಕು ಎಂದು ತಿಳಿಸಿದರು.

ವಿಶ್ವಕರ್ಮ ಒಬ್ಬ ಸಮಕಾಲೀನ ಹಿಂದೂ ಧರ್ಮದಲ್ಲಿ ಕುಶಲಕರ್ಮಿ ಮತ್ತು ದೈವಿಕ ವಾಸ್ತುಶಿಲ್ಪಿ ದೇವರು. ವಿಶ್ವಕರ್ಮ ಎಂಬ ಪದವನ್ನು ಮೂಲತಃ ಯಾವುದೇ ಶಕ್ತಿಯುತ ದೇವತೆಗೆ ಒಂದು ಹೆಸರಾಗಿ ಬಳಸಲಾಗುತ್ತದೆ. ನಂತರದ ಅನೇಕ ಸಂಪ್ರದಾಯಗಳಲ್ಲಿ, ವಿಶ್ವಕರ್ಮ ಕುಶಲಕರ್ಮಿ ದೇವರ ಹೆಸರಾಯಿತು ಎಂಬುವುದು ಇತಿಹಾಸ ಹೇಳುತ್ತದೆ ಎಂದು ತಿಳಿಸಿದರು.

ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಶ್ರೀಗಳು, ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾರ್ಯರು, ಬಂಡಿಗಣಿ ನೀಲಮಾಣಿಕಮಠದ ದಾಸೋಹ ಚಕ್ರವರ್ತಿ ಅನ್ನದಾನೇಶ್ವರ ಶ್ರೀಗಳು ಮಾತನಾಡಿದರು.

ರಬಕವಿಯ ಶೇಖರಾಚಾರ್ಯರು, ಮೌನೇಶ ಬಡಿಗೇರ, ಶಿರಸಂಗಿಯ ಪ್ರೊ. ಪಿ.ಬಿ. ಬಡಿಗೇರ, ಮಲ್ಲು ತುಂಗಳ, ನಗರಸಭೆ ಅಧ್ಯಕ್ಷೆ ವಿದ್ಯಾ ದಬಾಡಿ, ಉಪಾಧ್ಯಕ್ಷೆ ದೀಪಾ ಗಾಡಿವಡ್ಡರ, ಪ್ರಭಾಕರ ಸತ್ತಿ ನೇತೃತ್ವದಲ್ಲಿ ಕಲಶಾರೋಹಣ ಕಾರ್ಯಕ್ರಮ ನಡೆಯಿತು.

ಸುನೀಲ ಪತ್ತಾರ, ಅಭಿನಂದನ ಸೋನಾರ್, ಶಿವಕುಮಾರ ಜುಂಜಪ್ಪನವರ, ಅಶೋಕ ಬಡಿಗೇರ, ರಾಘವೇಂದ್ರ ಬಡಿಗೇರ, ಎಸ್. ಬಿ. ಹಾವಿನಾಳ ಸೇರಿ ರಬಕವಿ, ಹನಗಂಡಿ, ತೇರದಾಳ, ಮಹಾಲಿಂಗಪೂರ, ಮೂಡಲಗಿ, ಜಮಖಂಡಿ, ಹುನ್ನೂರ, ಮಧುರಖಂಡಿ, ಮುಧೋಳ ಸೇರಿ ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದರು.