ಜಮಖಂಡಿ: ಸಾಹಿತ್ಯ ಸೋಗಡನ್ನು ಅರ್ಥೈಸಿಕೊಳ್ಳಲು ಹಳಗನ್ನಡ ಜ್ಞಾನ ಅವಶ್ಯವಾಗಿದ್ದು, ಹಳಗನ್ನಡ ಬಗ್ಗೆ ನಿರ್ಲಕ್ಷೃ ಬೇಡ, ಜ್ಞಾನ ಅವಶ್ಯ ಎಂದು ಶಾಸಕ ನಾಡೋಜ ಜಗದೀಶ ಗುಡಗುಂಟಿ ಹೇಳಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ ವಿಭಾಗ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ, ಕಸಾಪ ತಾಲೂಕು ಘಟಕ, ಜಿಲ್ಲಾ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಹಾಗೂ ಸ್ಥಳೀಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಪ್ರೌಢಶಾಲಾ ವಿಭಾಗ ಸಹಯೋಗದಲ್ಲಿ ಶುಕ್ರವಾರ ಪ್ರೌಢಶಾಲಾ ವಿಭಾಗದ ಜ್ಞಾನ ಸಭಾಂಗಣದಲ್ಲಿ ಶುಕ್ರವಾರ ಡಾ.ಡಿ.ಎಲ್. ನರಸಿಂಹಚಾರ್ ದತ್ತಿನಿಧಿ ಅಂಗವಾಗಿ ಕನ್ನಡ ಶಿಕ್ಷಕರಿಗೆ 4 ದಿನಗಳ ಹಳಗನ್ನಡ ಸಾಹಿತ್ಯ ಬೋಧನಾ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಶದಲ್ಲಿ ಶ್ರೇಷ್ಠವಾದ ನಮ್ಮ ಕನ್ನಡ ಭಾಷೆಗೆ ಇಂದು ಧಕ್ಕೆ ತರುವಂತ ಕಾಲಘಟ್ಟದಲ್ಲಿ ನಾವಿದ್ದು, ಅದರಲ್ಲೂ ಹಳಗನ್ನಡ ವಿಷಯವನ್ನು ಅರ್ಥೈಸಿಕೊಂಡು ಬೋಧಿಸುವುದು ಕಷ್ಟಸಾಧ್ಯ. ಹಂಪಿ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ ವಿಭಾಗದ ಕಾರ್ಯ ಶ್ಲಾಘನೀಯ ಎಂದರು.
ಮಕ್ಕಳಲ್ಲಿ ಹಳಗನ್ನಡದ ಭಾಷಾ ಕೌಶಲದ ಅರಿವು ಮೂಡಿಸುವ ಕಾರ್ಯ ಭಾಷಾ ಶಿಕ್ಷಕರ ಮೇಲಿದೆ. ಪ್ರಾಚೀನತೆ ಹೊಂದಿದ ಕನ್ನಡ ಸಂಸ್ಕೃತಿ ಉಳಿಸಿ ಬೆಳೆಸಬೇಕಾಗಿದೆ. ಹಳಗನ್ನಡ ಸಾಹಿತ್ಯದ ಗಟ್ಟಿತನ ಬಿಟ್ಟುಹೋದರೆ ಮುಂದಿನ ಪೀಳಿಗೆಗೆ ಕನ್ನಡ ಕಲಿಸುವುದು ಕಠಿಣವಾಗುತ್ತದೆ ಎಂದರು.
ವಿಶ್ರಾಂತ ಕುಲಪತಿಗಳು ಭಾಷಾ ವಿದ್ವಾಂಸ ಡಾ.ಎ. ಮುರಿಗೆಪ್ಪ ಮಾತನಾಡಿ, ಬೇರೆ ಭಾಷೆಗಳ ಪ್ರಭಾವದ ಒತ್ತಡ ಸಮಯದಲ್ಲಿ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ನಮ್ಮ ಶಿಕ್ಷಕರು ಅರಿತುಕೊಂಡು ಪಾಠ ಬೋಧನೆ ಮಾಡುವ ಪರಂಪರೆ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ಹಂಪಿ ಕನ್ನಡ ವಿಶ್ವವಿದ್ಯಾಯದ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲಕ್ರಮೇಣ ಶಿಕ್ಷಕರು ಸಂಶೋಧನಾ ಪ್ರಬಂಧಗಳ ಅಧ್ಯಯನ ಅವಲೋಕಿಸಿ ಹೆಚ್ಚಿನ ಜ್ಞಾನವನ್ನು ಮಕ್ಕಳಿಗೆ ನೀಡಬೇಕಾಗಿದೆ. ಹಳಗನ್ನಡ ಸಾಹಿತ್ಯವೆಂದರೆ ಅದು ನಮ್ಮ ಪೂರ್ವಜರ ಇತಿಹಾಸ, ಕನಸು, ಪರಂಪರೆ ಹಾಗೂ ಪ್ರಾಚೀನತೆ ಅಧ್ಯಯನ ಮಾಡಿದಂತೆ, ಹೊಸಗನ್ನಡದಲ್ಲಿ ಇಲ್ಲದಂತಹ ಅನೇಕ ಅಂಶಗಳನ್ನು ಭಾಷಾ ಗಟ್ಟಿತನವನ್ನು ಹಳಗನ್ನಡದಲ್ಲಿ ಕಾಣಬಹುದಾಗಿದೆ ಎಂದು ಹೇಳಿದರು.
ಕನ್ನಡ ವಿವಿ ಹಸ್ತಪ್ರತಿಶಾಸ ವಿಭಾಗದ ಪ್ರಾಧ್ಯಾಪಕರು, ಶಿಬಿರದ ಮುಖ್ಯಸ್ಥ ಡಾ.ವೀರೇಶ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಾಗಲಕೋಟೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಆನಂದ ದೇಶಪಾಂಡೆ, ಶಿರಸಂಗಿ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಅಧ್ಯಕ್ಷ ಪ್ರೊ. ಪಿ.ಬಿ. ಬಡಿಗೇರ, ಜಿಲ್ಲಾ ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಸಂತೋಷ ತಳಕೇರಿ. ಬಿಇಒ ಎ.ಕೆ. ಬಸನ್ನವರ, ಉಪ ಪ್ರಾಚಾರ್ಯ ಮಹಾಂತೇಶ ನರಸನಗೌಡರ, ಹಿರಿಯ ಸಾಹಿತಿ ತಾತಾಸಾಹೇಬ್ ಬಾಂಗಿ, ಸಿದ್ದಣ್ಣ ಉತ್ನಾಳ, ಜಿಲ್ಲಾ ಗೌರವ ಕಾರ್ಯದರ್ಶಿ ಡಾ. ಚಂದ್ರಶೇಖರ ಕಾಳನ್ನವರ, ಸಂಗಮೇಶ ಬಡಿಗೇರ, ನಾಡಿನ ವಿವಿಧ ಭಾಗಗಳಿಂದ ವಿದ್ವಾಂಸರು, ಸಂಪನ್ಮೂಲ ವ್ಯಕ್ತಿಗಳು ಶಿಬಿರದಲ್ಲಿ ಉಪಸ್ಥಿತರಿದ್ದರು. ಬಿ.ಸಿ. ಮಲಕನ್ನವರ, ಎ.ಎಸ್. ಬಾಗಿ ನಿರೂಪಿಸಿದರು.
4 ದಿನಗಳವರೆಗೆ ನಡೆಯುವ ಶಿಬಿರದಲ್ಲಿ 80 ಜನ ಶಿಬಿರಾರ್ಥಿಗಳು ಭಾಗವಹಿಸಿದ್ದಾರೆ.
ಇದಕ್ಕೂ ಮುಂಚೆ ನಗರದ ರಮಾ ನಿವಾಸದಿಂದ ಶಿಬಿರ ಸ್ಥಳದವರೆಗೆ ಕನ್ನಡ ಭುವನೇಶ್ವರಿ ಮೆರವಣಿಗೆ ನಡೆಯಿತು.
ಪ್ರಾರಂಭದಲ್ಲಿ ಓಲೇಮಠದ ಲಿಂಗೈಕ್ಯ ಡಾ. ಚನ್ನಬಸವ ಮಹಾಸ್ವಾಮಿಗಳಿಗೆ ಒಂದು ನಿಮಿಷ ಮೌನಾಚರಣೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.