ಜಿಲ್ಲೆ

ಹೃದಯ ಸಂಬಂಧದ ಬಗ್ಗೆ ಭಯ ಬೇಡ: ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ಕೆ.ಎಸ್.ರವೀಂದ್ರನಾಥ್ ಸಲಹೆ

ಮೈಸೂರು: ಹೃದಯ ಸಂಬಂಧದ ಬಗ್ಗೆ ಜನರು ಗಾಬರಿ, ಭಯ ಆತಂಕ ಪಟ್ಟು ಜಯದೇವ ಆಸ್ಪತ್ರೆಗೆ ಬರುವ ಅವಶ್ಯಕತೆಯಿಲ್ಲ. ಆರಂಭಿಕವಾಗಿ ತಮ್ಮ ಸಮೀಪದ ವೈದ್ಯರಲ್ಲಿಯೇ ಪರಿಶೀಲಿಸಿ ಬಳಿಕ ಇಲ್ಲಿಗೆ ಬರಬಹುದು ಎಂದು ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ಕೆ.ಎಸ್.ರವೀಂದ್ರನಾಥ್ ಹೇಳಿದರು.

ನಗರದ ಕೆ.ಆರ್.ಎಸ್ ರಸ್ತೆಯಲ್ಲಿರುವ ಜಯದೇವ ಆಸ್ಪತ್ರೆಗೆ ಶನಿವಾರ ಭೇಟಿ ನೀಡಿ 34 ಹಾಸಿಗೆಗಳ ನೂತನ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರು ಜಯದೇವ ಆಸ್ಪತ್ರೆಗೆ ಪ್ರತಿದಿನ ಹೆಚ್ಚುವರಿಯಾಗಿ 400 ಜನ ಚಿಕಿತ್ಸೆಗೆ ಹೊರ ರೋಗಿಗಳಾಗಿ ಬರುತ್ತಿದ್ದು ವೈದ್ಯರಿಗೆ ಒತ್ತಡ ಹೆಚ್ಚಾಗಿದೆ ಎಂದು ತಿಳಿಸಿದರು.

ಅಲ್ಲದೇ ಬೆಂಗಳೂರು, ಲಬುರ್ಗಿ ಆಸ್ಪತ್ರೆಗಳಿಗೂ ಜನರ ಬರುತ್ತಿದ್ದಾರೆ. ಮಾಧ್ಯಮಗಳಲ್ಲಿ ಹಾಸನದಲ್ಲಿ ಹೃದಯಾಘಾತದಿಂದ ಹೆಚ್ಚಿನ ಜನರು ಸಾಯುತ್ತಿದ್ದಾರೆ ಎಂದು ಸುದ್ದಿ ಬಂದ ಹಿನ್ನೆಲೆಯಲ್ಲಿ ಜನರು ಗಾಬರಿಯಿಂದ ಬರುತ್ತಿದ್ದಾರೆ. ಆದರೆ ವಾಸ್ತವವಾಗಿ ಸಾವಿನ ಸಂಖ್ಯೆ ಹೆಚ್ಚಾಗಿಲ್ಲ. ಮಾಧ್ಯಮಗಳಲ್ಲಿ ವರದಿ ಮಾಡುವ ಸಂಖ್ಯೆ ಹೆಚ್ಚಾಗಿದೆ ಅಷ್ಟೇ ಎಂದರು.

ಮರಣ ಹೊಂದಿದವರೆಲ್ಲ ಹೃದಯಾಘಾತದಿಂದ ಮರಣ ಹೊಂದಿದ್ದಾರೆ ಎನ್ನುವ ಹಾಗಿಲ್ಲ. ಬೇರೆ ಬೇರೆ ಕಾರಣಗಳಿಂದ ಸಾವನಪ್ಪಿರಬಹುದು. ಸರ್ಕಾರ ಇದರ ಬಗ್ಗೆ ಅಧ್ಯಯನ ಮಾಡಲಾಗುತ್ತಿದೆ. ಹೆಚ್ಚಿನ ರಕ್ತದೊತ್ತಡ, ಸಕ್ಕರೆ ಕಾಯಿಲೆ ಇದ್ದರೆ, ಮದ್ಯಪಾನ, ಧೂಮಪಾನ ಮಾಡುತ್ತಿದ್ದಾರೆ. ಮಾನಸಿಕ ಒತ್ತಡವಿದ್ದರೆ ಸ್ಥಳೀಯ ವೈದ್ಯರ ಬಳಿ ತೋರಿಸಿಕೊಂಡು ಜಯದೇವ ಆಸ್ಪತ್ರೆಗೆ ಬರಬೇಕು. 30 ರಿಂದ 40 ವರ್ಷ ದಾಟಿದವರು ವರ್ಷಕ್ಕೊಮ್ಮೆ ಹೃದಯ ತಪಾಸಣೆ ಮಾಡಿಕೊಂಡರೆ ಒಳ್ಳೆಯದು ಎಂದರು.

ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಕೆ.ಎಸ್. ಸದಾನಂದ್, ಆರ್.ಎಂ.ಓ. ಡಾ. ಪಶುಪತಿ, ವೈದ್ಯರಾದ ಡಾ. ಸಂತೋಷ್, ಡಾ. ವೀಣಾ ನಂಜಪ್ಪ, ಡಾ. ಶಿವಸ್ವಾಮಿ ಸೋಸಲೆ, ಡಾ. ಜಯಪ್ರಕಾಶ್, ಡಾ. ವಿಶ್ವನಾಥ್, ಡಾ. ದೇವರಾಜ್, ಡಾ. ಕುಮಾರ್, ಡಾ. ಶ್ರೀನಿಧಿ ಹೆಗ್ಗಡೆ, ಡಾ. ಭಾರತಿ, ಡಾ. ಮಂಜುನಾಥ್, ಡಾ. ಜಯಶೀಲನ್, ಡಾ. ನಂಜಪ್ಪ, ಡಾ. ರಶ್ಮಿ, ಡಾ. ವಿನಾಯಕ್, ನರ್ಸಿಂಗ್ ಅಧೀಕ್ಷಕಿ ಯೋಗಲಕ್ಷ್ಮಿ, ಗುರುಮೂರ್ತಿ, ಪಿಆರ್‌ಓ ವಾಣಿ ಮೋಹನ್, ಸುಪ್ರಿಯಾ ಇತರರು ಇದ್ದರು.