ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹಾಸನ ವಿಭಾಗದ ಚನ್ನರಾಯಪಟ್ಟಣ ಘಟಕದಲ್ಲಿ ಪಟ್ಟಣದ ಅಗ್ನಿಶಾಮಕ ಠಾಣೆ ಅಧಿಕಾರಿ ಡಿ.ಟಿ.ದೇವರಾಜೇಗೌಡ ಅಗ್ನಿ ಅವಘಡ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಅಗ್ನಿಶಾಮಕ ಠಾಣೆ ಸಿಬ್ಬಂದಿ ಜಗದೀಶ್, ಶಿವಲಿಂಗೇಗೌಡ, ಸತೀಶ್, ಹನುಮಂತ, ಘಟಕದ ಪ್ರಭಾರ ವ್ಯವಸ್ಥಾಪಕ ಎ.ಎ.ಬಸವರಾಜು, ಸಹಾಯಕ ಕಾರ್ಯ ಅಧೀಕ್ಷಕ ನೂತನ್, ಸಂಚಾರ ನಿರೀಕ್ಷಕರಾದ ಎಚ್.ಎಚ್.ಮಲ್ಲೇಶ್, ಸಂಚಾರ ನಿರೀಕ್ಷಕ ರಮೇಶ್ ಸೇರಿದಂತೆ ಸಿಬ್ಬಂದಿ ಇದ್ದರು. 
ಜಿಲ್ಲೆ

ಬೆಂಕಿ ಅವಘಡಕ್ಕೆ ಭಯ ಬೇಡ, ಮುನ್ನೆಚ್ಚರಿಕೆ ವಹಿಸಿ

ಅಭಿನಯ್ ಎಚ್.ಎಂ

ಚನ್ನರಾಯಪಟ್ಟಣ: ಅಗ್ನಿ ಅವಘಡ ಸಂಭವಿಸಿದಾಗ ಬೇರೆಯವರನ್ನು ರಕ್ಷಿಸುವುದಲ್ಲದೆ ಸ್ವರಕ್ಷಣೆ ಹೇಗೆ ಮಾಡಬೇಕು ಎಂಬ ಬಗ್ಗೆ ಪಟ್ಟಣದ ಅಗ್ನಿಶಾಮಕ ಠಾಣೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹಾಸನ ವಿಭಾಗದ ಚನ್ನರಾಯಪಟ್ಟಣ ಘಟಕದಲ್ಲಿ ಶುಕ್ರವಾರ ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸಿದರು.

ಅಗ್ನಿಶಾಮಕ ಠಾಣಾಧಿಕಾರಿ ಡಿ.ಟಿ.ದೇವರಾಜೆ ಗೌಡ ಅಗ್ನಿ ಅವಘಡ ಕುರಿತು ಮಾತನಾಡಿ, ತೈಲ ಬೆಂಕಿ, ಗ್ಯಾಸ್ ಫೈರ್, ಎಲೆಕ್ಟ್ರಿಕಲ್ ಮತ್ತು ಮೆಟಲ್ ಫೈರ್ 4 ವಿಧದ ಬೆಂಕಿ ಇದೆ. ಅದರ ತೀವ್ರತೆಯನ್ನು ಆಧರಿಸಿ ಬೆಂಕಿ ನಂದಿಸಬೇಕು. ನೀರಿನಿಂದ ತಣಿಸುವಿಕೆ, ಬೇರ್ಪಡಿಸುವಿಕೆ, ಮುಚ್ಚುವಿಕೆ ಇವು ಬೆಂಕಿಯನ್ನು ನಂದಿಸುವ ವಿಧಾನಗಳು. ಯಾವ ಬಗೆಯ ಬೆಂಕಿಗೆ ಯಾವುದನ್ನು ಬಳಸಬೇಕು ಎಂಬ ಮಾಹಿತಿ ಅಗತ್ಯವಾಗಿ ತಿಳಿದುಕೊಳ್ಳಬೇಕು. ಅಗ್ನಿ ಅನಾಹುತಗಳು ಸಂಭವಿಸಿದಾಗ ಗಾಬರಿಗೊಳ್ಳದೆ ಬೆಂಕಿ ನಂದಿಸಲು ಅಗತ್ಯ ಕ್ರಮಕೈಗೊಳ್ಳಬೇಕು. ಜತೆಗೆ ಸಮೀಪದ ಅಗ್ನಿಶಾಮಕ ಠಾಣೆಗಳಿಗೆ ಕೂಡಲೇ ಮಾಹಿತಿ ನೀಡಬೇಕು ಎಂದರು. ಜತೆಗೆ ಬೆಂಕಿ ಕಾಣಿಸಿಕೊಂಡರೆ, ಗ್ಯಾಸ್ ಹೊತ್ತಿಕೊಂಡರೆ ಏನು ಮಾಡಬೇಕು ಇಂತಹ ಸಂದರ್ಭಗಳಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ನೌಕರರಿಗೆ ಮಾಹಿತಿ ನೀಡಿದರು.

ಬಳಿಕ ಬೆಂಕಿ ನಂದಿಸುವ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು. ನೀರನ್ನು ಸುಮಾರು ನೂರು ಅಡಿಗೂ ಎತ್ತರದಲ್ಲಿ ಹಾರಿಸಿ ಹಲವು ವಿಧಗಳಲ್ಲಿ ಚಿಮ್ಮಿಸಿದ್ದು ಎಲ್ಲರ ಮನ ಸೆಳೆಯಿತು.

ಅಗ್ನಿಶಾಮಕ ಠಾಣೆ ಸಿಬ್ಬಂದಿ ಜಗದೀಶ್, ಶಿವಲಿಂಗೇಗೌಡ, ಸತೀಶ್, ಹನುಮಂತ, ಘಟಕದ ಪ್ರಭಾರ ವ್ಯವಸ್ಥಾಪಕ ಎ.ಎ.ಬಸವರಾಜು, ಸಹಾಯಕ ಕಾರ್ಯ ಅಧೀಕ್ಷಕ ನೂತನ್, ಸಂಚಾರ ನಿರೀಕ್ಷಕರಾದ ಎಚ್.ಎಚ್.ಮಲ್ಲೇಶ್, ರಮೇಶ್ ಸೇರಿದಂತೆ ಸಿಬ್ಬಂದಿ ಇದ್ದರು.