ಬೆಂಗಳೂರು: ಜಗತ್ತಿನ ಮಾರಕ ಸೋಂಕಾಗಿರುವ ಏಡ್ಸ್ ಬಗ್ಗೆ ಜನರು ಭಯಪಡಬೇಕಾಗಿಲ್ಲ. ಬದಲಿಗೆ ಜಾಗೃತಿಯ ಅವಶ್ಯಕತೆ ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ದಿನೇಶ ಗುಂಡೂರಾವ್ ಅಭಿಪ್ರಾಯಿಸಿದ್ದಾರೆ.
ಯಶವಂತಪುರದ ದೇವರಾಜ ಅರಸ್ ಟ್ರಕ್ ಟರ್ಮಿನಲ್‌ನಲ್ಲಿ ಕರ್ನಾಟಕ ರಾಜ್ಯ ಏಡ್ಸ್ ಪ್ರವೆನ್‌ಷನ್ ಸೊಸೈಟಿ ಆಯೋಜಿಸಿದ್ದ ವಿಶ್ವ ಏಡ್ಸ್ ದಿನ-2024 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವೈದ್ಯಕೀಯ ವಿಜ್ಞಾನದಲ್ಲಿ ಇಂದಿಗೂ ಶಾಶ್ವತ ಪರಿಹಾರವಿಲ್ಲದ ಏಡ್ಸ್ ರೋಗದ ಬಗ್ಗೆ ಜನರಲ್ಲಿ ಈ ಹಿಂದೆ ಬಹಳ ತಪ್ಪು ಕಲ್ಪನೆಗಳಿದ್ದವು. ಜೊತೆಗೆ ಏಡ್ಸ್ ರೋಗಿಗಳನ್ನು ಒಂದು ರೀತಿಯ ಅಸ್ಪೃಶ್ಯತೆಯಿಂದ ಕಾಣಲಾಗುತ್ತಿತ್ತು. ಆದರೆ ಇತ್ತೀಚೆಗೆ ಏಡ್ಸ್ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದಿವೆ. ಪರಿಣಾಮಕಾರಿ ಚಿಕಿತ್ಸೆಗಳು ಕೂಡಾ ಬಂದಿದ್ದು, ರೋಗಿಗಳಾಗಲಿ ಅಥವಾ ಅವರ ಅವಲಂಬಿತರಾಗಲಿ ಆತಂಕ ಅಥವಾ ಅಸ್ಪೃಶ್ಯತೆಗೆ ಒಳಗಾಗುವ ಅವಶ್ಯಕೆ ಇಲ್ಲ.
ಸಾಮಾನ್ಯವಾಗಿ ಲಾರಿ ಚಾಲಕರು, ಲೈಂಗಿಕ ಕಾರ್ಯಕರ್ತರಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿರುತ್ತದೆ. ಅಸುರಕ್ಷಿತ ಲೈಂಗಿಕತೆ, ಚುಚ್ಚುಮದ್ದುಗಳ ಮರುಬಳಕೆ, ಸೋಂಕಿತ ಗರ್ಭಿಣಿಯರ ಮಕ್ಕಳಿಗೆ ಏಡ್ಸ್ ಬರಲು ಪ್ರಮುಖ ಕಾರಣ. ತಾವು ಸೋಂಕಿಗೆ ಒಳಗಾಗುವುದರ ಜೊತೆಗೆ ಸೋಂಕು ಹರಡುವಿಕೆಗೂ ಕಾರಣವಾಗುತ್ತಾರೆ. ಈ ಬಗ್ಗೆ ತಿಳುವಳಿಕೆ ಕೊಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಸರ್ಕಾರ ಮತ್ತು ವಿವಿಧ ಸಂಘ ಸಂಸ್ಥೆಗಳ ಸತತ ಪ್ರಯತ್ನದಿಂದ ರಾಜ್ಯದಲ್ಲಿ ಏಡ್ಸ್ ಪ್ರಮಾಣ ತಗ್ಗಿದೆ ಎಂದು ದಿನೇಶ ಗುಂಡೂರಾವ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಏಡ್ಸ್ ಜಾಗೃತಿ ಕುರಿತ ವಿವಿಧ ಮಾಹಿತಿ ಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಏಡ್ಸ್ ನಿಯಂತ್ರಣದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ವಿವಿಧ ಸಂಘ ಸಂಸ್ಥೆ ಮತ್ತು ಸರ್ಕಾರಿ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಕೆಎಸ್‌ಎಪಿಎಸ್ ನಿರ್ದೇಶಕ ಎನ್.ಎಂ.ನಾಗರಾಜ, ದೇವರಾಜ ಅರಸ್ ಟ್ರಕ್ ಟರ್ಮಿನಲ್ ಎಂ.ಡಿ. ಶಿವಪ್ರಕಾಶ ಸಿ.ಎನ್, ಆರೋಗ್ಯ ಇಲಾಖೆಯ ಅಧಿಕಾರಿಗಳಾದ ಡಾ.ನವೀನ್ ಭಟ್, ಡಾ.ಉಮಾ ಬುಗ್ಗಿ, ಗೋವಿಂದರಾಜ, ಲಾರಿ ಮಾಲೀಕರ ಸಂಘದ ಮುಖಂಡ ಚನ್ನಾರೆಡ್ಡಿ, ಏಡ್ಸ್ ರೋಗವನ್ನು ಹಿಮ್ಮೆಟ್ಟಿಸಿ ಮಾದರಿಯಾಗಿರುವ ಪಾರ್ವತಮ್ಮ ಮತ್ತಿತರರು ಉಪಸ್ಥಿತರಿದ್ದರು.
ಕಳೆದ ವರ್ಷದ ಒಟ್ಟು ಪರೀಕ್ಷೆಯಲ್ಲಿ ಶೇ.0.33 ಸೋಂಕು ಪತ್ತೆಯಾಗಿದ್ದು, 7 ಲಕ್ಷಕ್ಕಿಂತ ಹೆಚ್ಚಿನ ಗರ್ಭಿಣಿಯರಲ್ಲಿ ಕೇವಲ 247 ಗರ್ಭಿಣಿಯರಲ್ಲಿ ಸೋಂಕು ಪತ್ತೆಯಾಗಿದೆ. ಶೇ.0.03 ಇರುವ ಈ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವ ಗುರಿ ಇದೆ. ಸಾವಿನ ಸಂಖ್ಯೆ ಕೂಡಾ ಗಣನೀಯವಾಗಿ ಕಡಿಮೆ ಆಗಿದೆ. -ದಿನೇಶ ಗುಂಡೂರಾವ್, ಆರೋಗ್ಯ ಸಚಿವ