ಹಿರೇಕೆರೂರ: ಯುವಕರು ಇಂದು ಮಾದಕ ದ್ರವ್ಯಗಳ ದಾಸರಾಗುತ್ತಿದ್ದು, ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದರಿಂದ ರೋಗಪೀಡಿತರಾಗಿ ಸಣ್ಣ ವಯಸಿನಲ್ಲಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ದೇಶದ ಅಭಿವೃದ್ಧಿಗೆ ದೊಡ್ಡ ಕೊಡಲಿ ಪೆಟ್ಟು ನೀಡಲಿದೆ ಎಂದು ತಹಸೀಲ್ದಾರ್ ಎಚ್. ಪ್ರಭಾಕರಗೌಡ ಹೇಳಿದರು.
ಮಾದಕದ್ರವ್ಯ ಮತ್ತು ಅಪರಾಧ ತಡೆ ಮಾಸಾಚರಣೆ ನಿಮಿತ್ತ ಪೊಲೀಸ್ ಇಲಾಖೆ ವತಿಯಿಂದ ಪಟ್ಟಣದ ಸರ್ವಜ್ಞ ವೃತ್ತದಲ್ಲಿ ಭಾನುವಾರ ಏರ್ಪಡಿಸಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಯುವಕರು ಮದ್ಯಪಾನ, ಡ್ರಗ್ಸ್, ಧೂಮಪಾನದಂತಹ ಅನೇಕ ದುಶ್ಚಟಗಳ ದಾಸರಾಗುತ್ತಿದ್ದು, ಅನೇಕ ದೊಡ್ಡ ಅಪರಾಧಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇದರಿಂದ ಅವರ ಆರೋಗ್ಯ ಮತ್ತು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದು ಮುಂದೆ ಸುಸಜ್ಜಿತ ಸಮಾಜ ನಿರ್ವಣಕ್ಕೆ ಬಹಳ ಅಡಚಣೆಯಾಗಲಿದೆ ಎಂದರು.
ಸಿಪಿಐ ಬಸವರಾಜ ಮಾತನಾಡಿ, ಮಾದಕ ವಸ್ತುಗಳ ಮಾರಾಟ, ಕಳ್ಳತನ, ಏನೇ ಅಪರಾಧಗಳು ನಡೆದರೂ ಭಯಪಡದೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಯುವಕರು ಕೇವಲ ಅಲ್ಪ ಮೋಜು ಮಸ್ತಿಗಾಗಿ, ಮದ್ಯಪಾನ, ಮಾದಕ ದ್ರವ್ಯ, ಧೂಮಪಾನ ಸೇವಿಸುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ ಎಂದರು.
ಇದೆ ವೇಳೆ ಪೋಲಿಸ್ ಇಲಾಖೆ, ಆಟೋ ಚಾಲಕರು, ಮಾಲೀಕರ ಸಂಘದಿಂದ ಪಟ್ಟಣದ ಸರ್ವಜ್ಞ ವೃತ್ತದಿಂದ ಜಿ.ಬಿ. ಶಂಕರಾವ್ ವೃತ್ತದವರೆಗೆ ಜಾಗೃತಿ ಜಾಥಾ ನಡೆಯಿತು.
ಪೋಲಿಸ್ ಸಬ್ ಇನ್ಸ್ಪೆಕ್ಟರ್ಗಳಾದ ನೀಲಪ್ಪ ನರಲಾರ, ಚಂದ್ರಶೇಖರ ವಿಭೂತಿ, ಚಂದನ ಚಲುವಯ್ಯ, ಕೃಷ್ಣಪ್ಪ ತೋಪಿನ, ಪ್ರಭು ತಳವಾರ, ವಿ.ವಿ. ಗಂಗಪ್ಪಳವರ ಹಾಗೂ ಪೊಲೀಸರು, ಆಟೋ ಚಾಲಕರು, ಮಾಲೀಕರು ಇದ್ದರು.