ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘಕ್ಕೆ ಚ್ಯುತಿ ಬಾರದಂತೆ ಸರ್ಕಾರ ಮಧ್ಯಪ್ರವೇಶಿಸಿ ಆಡಳಿತಾಧಿಕಾರಿ ನೇಮಕ ಮಾಡುವ ಸನ್ನಿವೇಶಕ್ಕೆ ದಾರಿ ಮಾಡಿಕೊಡದಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ, ಸಂಘದ ಪದಾಧಿಕಾರಿಗಳಿಗೆ ಕಿವಿಮಾತು ಹೇಳಿದ್ದಾರೆ.
ರಾಜ್ಯ ಒಕ್ಕಲಿಗರ ಸಂಘ ಶುಕ್ರವಾರ ಕುವೆಂಪು ಸಭಾಂಗಣದಲ್ಲಿ ಆಯೋಜಿಸಲಾಗಿದ್ದ "ಕೆಂಪೇಗೌಡ ವೈದ್ಯಕಿಯ ಮಹಾ ವಿದ್ಯಾಲಯಕ್ಕೆ (ಕಿಮ್ಸ್) ಪದವಿ 100 ಹಾಗೂ ಸ್ನಾತಕೋತ್ತರ ವೈದ್ಯಕಿಯ ಪದವಿ ಕೋರ್ಸ್ಗೆ 68 ಸೀಟುಗಳ ಮಂಜೂರಾತಿಗೆ ಕಾರಣರಾದವರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಇಬ್ಬರು ಸಂದೇಶ ರವಾನಿಸಿದರು. ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಸಮಾಜದ ಶ್ರೇಯೋಭಿವೃದ್ಧಿಗಾಗಿ ಉದಾತ್ತ ಚಿಂತನೆಗಳಿಂದ ಜನ್ಮತಾಳಿರುವ ರಾಜ್ಯ ಒಕ್ಕಲಿಗರ ಸಂಘ ಇವತ್ತು ಗುಂಪುಗಾರಿಕೆಯಿಂದ ಸೊರಗುತ್ತಿದೆ. ಪ್ರತಿನಿತ್ಯ ಗುಂಪುಗಾರಿಕೆ ಮೂಲಕ ಹೊರಗಡೆ ಸಂದ ಬಗ್ಗೆ ಜನ ಲಘುವಾಗಿ ಮಾತನಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ. 3 ಅಥವಾ 6 ತಿಂಗಳಿಗೆ ಒಮ್ಮೆ ಪದಾಧಿಕಾರಿಗಳನ್ನು ಬದಲಾವಣೆ ಮಾಡಿಕೊಂಡು ಗುಂಪುಗಾರಿಕೆ ನಡೆಸಿದರೆ ಸಂದ ಗತಿ ಏನು? ಒಕ್ಕಲಿಗ ಸಮಾಜದ ಮಕ್ಕಳ ಭವಿಷ್ಯದ ಪ್ರಶ್ನೆ ಏನು? ಎಂದು ಖಾರವಾಗಿ ಪ್ರಶ್ನಿಸಿದರು.
ಹಿಂದೆ ನಮ್ಮ ಒಕ್ಕಲು ಸಮಾಜದ ಪೂರ್ವಿಕರು ಸಂಘ ಕಟ್ಟಲು ಪಟ್ಟ ಶ್ರಮ ಏನು ಎಂಬುದನ್ನು ಈಗಿನ ಆಡಳಿತ ಮಂಡಳಿಯಲ್ಲಿರುವ 35 ಜನ ನಿರ್ದೇಶಕರು ಅರ್ಥ ಮಾಡಿಕೊಳ್ಳಬೇಕು. ಬೆಂದ ಮನೆಯಲ್ಲಿ ಗಳ ಇರಿಯುವಂತಹ ಜನರು ಕೂಡ ಸಂಘದಲ್ಲಿ ಸೇರಿಕೊಂಡಿದ್ದಾರೆ. ಸಂಘಕ್ಕೆ, ಒಕ್ಕಲಿಗ ಸಮಾಜಕ್ಕೆ ಕಿಂಚಿತ್ತು ಒಳ್ಳೆಯದು ಮಾಡಬೇಕು ಎಂಬ ಹಂಬಲ ಹೊಂದಿರುವ ಕೆಲವರು ಕೂಡ ಈ ಸಂಘದಲ್ಲಿದ್ದಾರೆ. ಆದರೆ, ಸಂಘಕ್ಕೆ ಬಂದರೆ ಸಮಾಜಕ್ಕೆ ಒಳ್ಳೆಯದು ಮಾಡುವ ಬದಲು ಒಂದಷ್ಟು ಸಂಪಾದನೆ ಮಾಡಿಕೊಂಡು ಹೋಗೋಣ ಎಂದು ಸ್ವಾರ್ಥಿಗಳಾಗಿ ಆಲೋಚನೆ ಮಾಡುವ ವ್ಯಕ್ತಿಗಳಿಂದ ಸಮಾಜಕ್ಕೆ ಏನು ಉಪಯೋಗ? ಎಂದು ಸಚಿವರು ಪ್ರಶ್ನಿಸಿದರು. ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ವಿಜಯನಗರ ಶಾಖಾ ಮಠದ ಶ್ರೀಸೌಮ್ಯನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಸಂಘದ ಅಧ್ಯ ಸಿ.ಎನ್.ಬಾಲಕೃಷ್ಣ, ಗೌರವಾಧ್ಯಕ್ಷ ಎಂ.ಪುಟ್ಟಸ್ವಾಮಿ, ಪದಾಧಿಕಾರಿಗಳಾದ ಆರ್.ಪ್ರಕಾಶ್, ರಾವೇಂದ್ರ, ಸಿ.ದೇವರಾಜು, ಎಂ.ಎಸ್.ಉಮಾಪತಿ ಮತ್ತಿತರರಿದ್ದರು.
ಸಂಘಕ್ಕೆ ದ್ರೋಹ ಬಗೆಯಬೇಡಿ: ಸಂಘದಲ್ಲಿ ಉನ್ನತ ಹುದ್ದೆಯಲ್ಲಿರುವವರು ಸರ್ವಾಧಿಕಾರಿಯಂತೆ ವರ್ತಿಸುವುದು ಬೇಡ. ಇಲ್ಲಿ ನೀವು "ಸರ್ವೆಂಟ್' ಅಷ್ಟೇ. ನಾವು ಸಹ ಮಠದ ಮಾಲೀಕರಲ್ಲ. ಮಠವನ್ನು ಕಾಯುವ "ಕಾವಲುಗಾರರು'. ಸಂಕ್ಕೆ ದ್ರೋಹ ಬಗೆಯಬೇಡಿ. ಸರ್ಕಾರದಿಂದ ಆಡಳಿತಗಾರರನ್ನು ನೇಮಕ ಮಾಡುವ ಸನ್ನಿವೇಶ ತಂದುಕೊಳ್ಳಬೇಡಿ. ಸಂದ ಆಸ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಗಮನವಹಿಸಿ. ಸಾಕಷ್ಟು ಹಿರಿಯರು, ಎಚ್.ಡಿ.ದೇವೇಗೌಡ ಅವರ ಕುಟುಂಬ ಸಂದಿಂದ ಒಂದು ಕಾಫಿ, ತಿಂಡಿ ಸಹ ಸೇವನೆ ಮಾಡಿಲ್ಲ. ಇಂತಹ ನಿಸ್ವಾರ್ಥಿಗಳು ಸಮಾಜಕ್ಕೆ ನೀಡಿರುವ ಕೊಡುಗೆಯನ್ನು ಮರೆಯದೇ ಸಂಘದ ಗೌರವ ಕಡಿಮೆಯಾಗದಂತೆ ನೋಡಿಕೊಳ್ಳಬೇಕೆಂದು ಎಂದು ಶ್ರೀನಂಜಾವಧೂತ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಖಾಸಗಿ ಆಸ್ಪತ್ರೆಗಳ ಹಾವಳಿ ಹೆಚ್ಚಾಗಿರುವ ಇಂತಹ ವೇಳೆಯಲ್ಲಿ ಸೇವಾ ಮನೋಭಾವದಿಂದ ನಡೆಯುತ್ತಿರುವ ಕಿಮ್ಸ್ ರೀತಿಯ ಆಸ್ಪತ್ರೆಗಳು ಬಡವರಿಗೆ ಮತ್ತಷ್ಟು ಗುಣಮಟ್ಟ ಚಿಕಿತ್ಸೆ ನೀಡುವಂತಾಗಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿನ ಶುಲ್ಕವನ್ನು ಹೆಚ್ಚಳ ಮಾಡಿ ಬಡವರಿಗೆ ರಾಜ್ಯ ಸರ್ಕಾರ ಅನ್ಯಾಯ ಮಾಡುತ್ತಿದೆ.
| ಆರ್.ಅಶೋಕ, ವಿಧಾನಸಭೆ ಪ್ರತಿಪಕ್ಷ ನಾಯಕ.