ಕೋಲಾರ: ಜಿಲ್ಲಾದ್ಯಂತ ಮಾ.21 ರಿಂದ ಆರಂಭಗೊಳ್ಳುತ್ತಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಉಸ್ತುವಾರಿ ವಹಿಸಿಕೊಂಡಿರುವ ಮುಖ್ಯ ಅಧೀಕ್ಷಕರು, ಉಪ ಮುಖ್ಯಅಧೀಕ್ಷಕರು, ಪ್ರಶ್ನೆಪತ್ರಿಕೆ ಪಾಲಕರು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ, ಪರೀಕ್ಷಾ ಪಾವಿತ್ರ$್ಯತೆಗೆ ಧಕ್ಕೆಯಾಗದಂತೆ ಮತ್ತು ಗೊಂದಲಗಳಿಗೆ ಅವಕಾಶ ನೀಡದೇ ಸುಗಮ ಪರೀಕ್ಷೆ ನಡೆಸಿಕೊಡಿ ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ಸೂಚನೆ ನೀಡಿದರು.
ನಗರದ ಸ್ಕೌಟ್ಸ್ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲೆಯ ಎಲ್ಲ 65 ಪರೀಕ್ಷಾ ಕೇಂದ್ರಗಳ ಮುಖ್ಯಅಧೀಕ್ಷಕರು, ಉಪಮುಖ್ಯಅಧೀಕ್ಷಕರು, ಪ್ರಶ್ನೆಪತ್ರಿಕೆ ಪಾಲಕರ ಸಭೆಯಲ್ಲಿ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷಾ ಕಾರ್ಯದಲ್ಲಿ ಯಾವುದೇ ಅಚಾತುರ್ಯಗಳು ನಡೆಯದಂತೆ ಎಚ್ಚರವಹಿಸಬೇಕಾದ ಹೊಣೆ ಮುಖ್ಯ ಅಧೀಕ್ಷಕರದ್ದಾಗಿದೆ. ಜಿಲ್ಲೆಯ ಬಗ್ಗೆ ರಾಜ್ಯದ ಮಟ್ಟದಲ್ಲಿ ಒಳ್ಳೆಯ ಹೆಸರಿದ್ದು, ಜಿಲ್ಲೆಯ ಘನತೆಗೆ ಕುತ್ತು ತಾರದಿರಿ. ಪರೀಕ್ಷಾ ಸಿಬ್ಬಂದಿ ಕಡ್ಡಾಯವಾಗಿ ಗುರುತಿನ ಚೀಟಿ ಧರಿಸಬೇಕು. ಕೇಂದ್ರಕ್ಕೆ ಅನಧಿಕೃತ ವ್ಯಕ್ತಿಗಳ ಪ್ರವೇಶಕ್ಕೆ ಅವಕಾಶ ನೀಡದಿರಿ. ಮುಖ್ಯ ಅಧೀಕ್ಷರು ಹೊರತುಪಡಿಸಿ ಉಳಿದ ಸಿಬ್ಬಂದಿ ಮೊಬೈಲ್ ತರಬಾರದು. ನೀವು ಕೇಂದ್ರಕ್ಕೆ ನಿಗದಿತ ಸಮಯಕ್ಕೆ ಹಾಜರಿದ್ದು ಮಾರ್ಗಾಧಿಕಾರಿಗಳಿಂದ ಪ್ರಶ್ನೆಪತ್ರಿಕೆ ಸ್ವೀಕರಿಸಿ ಎಂದರು.
ಪ್ರತಿ ಕೊಠಡಿಯಲ್ಲೂ ಉತ್ತಮ ಬೆಳಕು, ವಿದ್ಯುತ್ ಬಲ್ಪ್ಗಳ ಅಳವಡಿಕೆಯಾಗಿದೆಯೇ ಗಮನಿಸಿ. ಪರೀಕ್ಷಾ ಸಮಯದಲ್ಲಿ ವಿದ್ಯುತ್ ಕಡಿತ ಮಾಡದಂತೆ ಜಿಲ್ಲಾಧಿಕಾರಿಯವರು ಈಗಾಗಲೇ ಬೆಸ್ಕಾಂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದರು.
ಯಾವೊಬ್ಬ ವಿದ್ಯಾರ್ಥಿಯೂ ನೆಲದ ಮೇಲೆ ಕುಳಿತು ಪರೀಕ್ಷೆ ಬರೆಯುವಂತಿಲ್ಲ. ಅಗತ್ಯ ಪ್ರಮಾಣದಲ್ಲಿ ಡೆಸ್ಕ್ ಇರಲೇಬೇಕು ಮತ್ತು ಸುಸ್ಥಿತಿಯಲ್ಲಿರಬೇಕು. ಈ ಕುರಿತು ಇಂದೇ ಕೇಂದ್ರಗಳಿಗೆ ಭೇಟಿ ನೀಡಿ ಗಮನಹರಿಸಿ, ಮಕ್ಕಳು ಪರೀಕ್ಷೆ ಬರೆಯಲು ಅಡ್ಡಿಪಡಿಸುವ ಯಾವುದೇ ಕೆಲಸ ಆಗಬಾರದು ಎಂದರು.
ಶಿಕ್ಷಣಾಧಿಕಾರಿ ವೀಣಾ ಮಾತನಾಡಿ, ಪ್ರತಿ ಪರೀಕ್ಷಾ ಕೇಂದ್ರದಲ್ಲೂ ಸಿಸಿ ಕ್ಯಾಮರಾ ಕಡ್ಡಾಯವಾಗಿದೆ. ಕೇಂದ್ರದ ಪ್ರವೇಶದ್ವಾರ, ಕಾರಿಡಾರ್ ಹಾಗೂ ಪ್ರಶ್ನೆಪತ್ರಿಕೆ ಬಂಡಲ್ ತೆಗೆಯುವ ಮತ್ತು ಉತ್ತರ ಪತ್ರಿಕೆ ಬಂಡಲ್ ಮಾಡುವ ಮುಖ್ಯ ಅಧೀಕ್ಷಕರ ಕಚೇರಿ, ಕೊಠಡಿಗಳಲ್ಲಿ ಸಿಸಿ ಕ್ಯಾಮರಾ ಇರುವ ಹಾಗೂ ಸುಸ್ಥಿತಿಯಲ್ಲಿರುವ ಕುರಿತು ದೃಢಪಡಿಸಿಕೊಳ್ಳಿ ಎಂದು ಸೂಚಿಸಿದರು.
ಸಿಸಿ ಕ್ಯಾಮರಾದಲ್ಲಿನ ಮಾಹಿತಿಯನ್ನು ಇಲಾಖೆ ಅಧಿಕಾರಿಗಳಿಗೆ ಹೊರತುಪಡಿಸಿ ಬೇರೆ ಯಾರಿಗೂ ನೀಡಬಾರದು ಪರೀಕ್ಷೆಗೆ ಪೂರ್ವತಯಾರಿ ಮಾಡಿಕೊಳ್ಳಿ, ಯಾವುದೇ ಸಮಸ್ಯೆಗಳಾಗದಂತೆ ಎಚ್ಚರವಹಿಸಿ ಎಂದರು.
ವಿಷಯ ಪರಿವೀಕ್ಷಕ ಶಂಕರೇಗೌಡ ಮಾತನಾಡಿ, ಡಿವೈಪಿಸಿ ರಾಜೇಶ್ವರಿ, ಕೋಲಾರ ಬಿಇಒ ಮಧುಮಾಲತಿ ಪಡುವಣೆ, ವಿವಿಧ ತಾಲೂಕುಗಳ ಬಿಇಒಗಳಾದ ಗುರುಮೂರ್ತಿ, ರಾಮಚಂದ್ರಪ್ಪ, ಮುನಿಲಕ್ಷ$್ಮಯ್ಯ, ವಿಷಯ ಪರಿವೀಕ್ಷಕ ಸಮೀವುಲ್ಲಾ, ತಾಲೂಕು ಪರೀಕ್ಷಾ ನೋಡಲ್ ಅಧಿಕಾರಿಗಳಾದ ಸಿ.ಎಂ.ವೆಂಕಟರಮಣಪ್ಪ, ಲಕ್ಷಿ$್ಮ ಕಾಂತ್, ಸೋಮಶೇಖರ್, ವೆಂಕಟಸ್ವಾಮಿ, ಕಾರ್ತಿಕ್, ಲಕ್ಷಿ$್ಮ ನಾರಾಯಣ ಸೇರಿ ಜಿಲ್ಲೆಯ ಎಲ್ಲ 65 ಕೇಂದ್ರಗಳ ಮುಖ್ಯಅಧೀಕ್ಷಕರು, ಉಪಮುಖ್ಯ ಅಧೀಕ್ಷಕರು, ಪ್ರಶ್ನೆಪತ್ರಿಕೆ ಪಾಲಕರು ಇದ್ದರು.
ಮೂಲಸೌಲಭ್ಯಗಳನ್ನು ಕುರಿತು ಗಮನಿಸಿ:
ಪ್ರತಿ ಪರೀಕ್ಷಾ ಕೇಂದ್ರದಲ್ಲೂ ಮಕ್ಕಳಿಗೆ ತೊಂದರೆಯಾಗದಂತೆ ಕ್ರಮವಹಿಸಿ, ಕುಡಿಯುವ ನೀರು, ಶೌಚಗೃಹ ವ್ಯವಸ್ಥೆ, ಗಾಳಿ ಬೆಳಕು ಸಮರ್ಪಕವಾಗಿರುವ ಕುರಿತು ಕೇಂದ್ರಗಳಿಗೆ ಮೊದಲೇ ಭೇಟಿ ನೀಡಿ ಗಮನಿಸಿಕೊಳ್ಳಿ. ಏನಾದರೂ ಸಮಸ್ಯೆ ಇದ್ದರೆ ಮುಖ್ಯ ಅಧೀಕ್ಷಕರಿಗಾಗಿ ಮಾಡಿರುವ ವಾಟ್ಸಾಪ್ ಗ್ರೂಪ್ನಲ್ಲಿ ಮಾಹಿತಿ ಹಾಕಿ. ಕೂಡಲೇ ಸ್ಪಂದಿಸುವುದಾಗಿ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ತಿಳಿಸಿದರು.
ಕೇಂದ್ರದಲ್ಲಿ ದಾಖಲೆ ನಿರ್ವಹಣೆಗೆ ಒತ್ತು:
ಜಿಲ್ಲಾ ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಸಗೀರಾ ಅಂಜುಂ ಮಾತನಾಡಿ, ಪರೀಕ್ಷಾ ವಿಧಾನ, ದಾಖಲೆಗಳ ನಿರ್ವಹಣೆ ಕುರಿತು ಮಾಹಿತಿ ನೀಡಿ, ಪರೀಕ್ಷಾ ಕೇಂದ್ರದಲ್ಲಿ ಕೊಠಡಿವಾರು ವಿದ್ಯಾರ್ಥಿಗಳ ಹಂಚಿಕೆ ವಹಿ, ಸಿಬ್ಬಂದಿ ವಹಿ, ಕೇಂದ್ರ ನಾಮಯಾದಿ ಪಟ್ಟಿ, ಹಾಜರಾತಿ ಪುಸ್ತಕ, ಅಧೀಕ್ಷಕರ, ಕೊಠಡಿ ಮೇಲ್ವಿಚಾರಕರ ಸಭಾ ನಡವಳಿ, ಪ್ರಶ್ನೆಪತ್ರಿಕೆ ಹಾಗೂ ಉತ್ತರ ಪತ್ರಿಕೆ ವಿತರಣಾ ವಹಿ, ಗೈರು ಹಾಜರಿ ತಖ್ತೆ, ಪ್ರಶ್ನೆಪತ್ರಿಕೆ ಬಂಡಲ್, ಉತ್ತರ ಪತ್ರಿಕೆ ಬಂಡಲ್ಗಳ ಸ್ವೀಕೃತಿ ಹಾಗೂ ರವಾನೆ ವಹಿ, ಸಂದರ್ಶಕರ ವಹಿ, ಪರೀಕ್ಷಾ ಅವ್ಯವಹಾರಗಳ ವಹಿ ಹೀಗೆ ಹಲವಾರು ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸಿ ಎಂದು ಸಲಹೆ ನೀಡಿದರು.